ಕರ್ನಾಟಕ ಸುದ್ದಿ

ಹತ್ತಿ ಬೆಳೆದ ರೈತರ ಪರದಾಟ; ಮೂರು ದಿನಗಳಿಂದ ಹತ್ತಿ ಮಾರಾಟವಾಗದೇ ರೈತ ಕಂಗಾಲು

— ಸಿರಾಜುದ್ದೀನ್ ಬಂಗಾರ್, ಸಂಪಾದಕರು

ಕೊರೋನಾ ಸಂಕಷ್ಟದ ಮಧ್ಯೆ ಗದಗ ಜಿಲ್ಲೆಯ ಹತ್ತಿ ಬೆಳೆಗಾರನೀಗ ಸಮಸ್ಯೆಗೆ ಸಿಲುಕಿದ್ದಾನೆ. ತಾನು ಬೆಳೆದ ಹತ್ತಿ ಕಳೆದ ಮೂರು ದಿನಗಳಿಂದ ಮಾರಾಟವಾಗದೇ ರೈತ ಕಂಗಾಲಾಗಿದ್ದಾನೆ. ನಗರದ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿಯಲ್ಲಿನ ಖರೀದಿ ಕೇಂದ್ರದಲ್ಲಿ ಹತ್ತಿಯನ್ನು ಗ್ರೇಡಿಂಗ್ ನೆಪವೊಡ್ಡಿ ಖರೀದಿ ಮಾಡದೇ ವಾಪಾಸ್ ಕಳಿಸುತ್ತಿರುವುದು ಇದೆಲ್ಲಕ್ಕೂ ಕಾರಣ.

ಗದಗ, ನರಗುಂದ ಹಾಗೂ ರೋಣ ತಾಲೂಕಿನ ಹಲವೆಡೆ ಅಪಾರ ಪ್ರಮಾಣದ ಹತ್ತಿಯನ್ನು ಬೆಳೆಯಲಾಗುತ್ತದೆ. ಬೆಳೆದ ಹತ್ತಿಯನ್ನು ವಿವಿದೆಡೆಯಿಂದ ರೈತರು ಟ್ರಾಕ್ಟರ್‌ ಮೂಲಕ ಸೊಸೈಟಿಗೆ ತಂದಿದ್ದಾರೆ. ಆದರೆ, ಮೂರು ದಿನಗಳಾದರೂ ಸಹ ಹತ್ತಿ ಮಾರಾಟವಾಗದೆ ಹಾಗೇ ಉಳಿದಿದೆ. ಪರಿಣಾಮ ಹತ್ತಿ ಬೆಳೆದ ರೈತ ಅನ್ನ ನೀರಿಲ್ಲದೇ ಪರದಾಡುತ್ತಿರುವುದು ವಿಪರ್ಯಾಸ.

ಗುಣಮಟ್ಟ ಸರಿಯಾಗಿಲ್ಲವೆಂಬ ನೆಪವೊಡ್ಡಿ ಹತ್ತಿಯನ್ನು ಖರೀದಿ ಮಾಡಲು ಭಾರತೀಯ ಹತ್ತಿ ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.  ಅಸಲಿಗೆ ಜಮೀನಿನಲ್ಲಿ ಬೆಳೆದ ಹತ್ತಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರಲು ಸಾಕಷ್ಟು ಹಣ ಖರ್ಚು ತಗಲುತ್ತದೆ. ಸಾಲ ಮಾಡಿ ಬೆಳೆದ ಹತ್ತಿ ಗುಣಮಟ್ಟ ಸರಿಯಾಗಿಲ್ಲ ಎಂದರೆ ನಾವು ಏನು ಮಾಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಬಳಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂದೆ ಟ್ರ್ಯಾಕ್ಟರ್ ಸಮೇತ ಪ್ರತಿಭಟನೆ ಮಾಡಲು ಮುಂದಾದರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಕೂಡಲೇ ಜಿಲ್ಲಾಧಿಕಾರ ಎಚ್ಚೆತ್ತು ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಯನ್ನು ಆಲಿಸಿ ಪರಿಹರಿಸಬೇಕಿದೆ ಎಂಬುದು ಎಲ್ಲರ ಆಶಯ.

Continue

Related Articles

Leave a Reply

Your email address will not be published. Required fields are marked *

Back to top button
Close
Close