ಲೇಖನ

ಕರೋನಾದೊಂದಿಗಿನ ಒಲ್ಲದ ಬದುಕಿಗೆ ಸಿದ್ಧವಾಗಬೇಕಿದೆ!

ಲೇಖನ: ವಿಜಯ್. ಎ. ಸರೋದೆ, ಪತ್ರಕರ್ತರು ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕ

ಕರೋನಾದೊಂದಿಗಿನ ಒಲ್ಲದ ಬದುಕಿಗೆ ಸಿದ್ಧವಾಗಬೇಕಿದೆ!

ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧಕರು Covid-19 ಬಗ್ಗೆ ಉನ್ನತ ಅಧ್ಯಯನ ನಡೆಸಿ, ನೀಡಿರುವ ಅಭಿಪ್ರಾಯದ ಪ್ರಕಾರ “ಕರೋನ ಅಷ್ಟು ಸಲುಭಕ್ಕೆ ನಿಯಂತ್ರಣಕ್ಕೆ ಬರುವ ಕಾಯಿಲೆಯಲ್ಲ. ಇದು ಎಚ್ಐವಿ ಕಾಯಿಲೆಯಂತೆ ಮನುಷ್ಯ ಜೀವನಕ್ಕೆ ಸವಾಲಾಗಿಯೇ ಶಾಶ್ವತವಾಗಿ ಉಳಿಯಲಿದೆ. ಲಸಿಕೆ ಹಾಗೂ ಔಷಧ ಕಂಡುಹಿಡಿದರೂ, ಭೂಮಿ ಮಾತ್ರ ಕರೋನಾ ಮುಕ್ತವಾಗುವುದಿಲ್ಲ. ಅದು ಫ್ಲೂ(ಜ್ವರ), ಮಲೇರಿಯಾ, ಡೆಂಗ್ಯುನಂತೆ ಮನುಷ್ಯ ಜೀವನದ ಜೊತೆಜೊತೆಗೇ ನಡೆಯಲಿದೆ”.

ಮಾರಣಾಂತಿಕ ಏಡ್ಸ್ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧ ಕಂಡುಹಿಡಿಯುವ ಪ್ರಯತ್ನವನ್ನು ದಶಕಗಳಿಂದ ಮಾಡಲಾಗುತ್ತಿದೆಯಾದರೂ, ಅದು ಈವರೆಗೆ ಸಾಧ್ಯವಾಗಿಲ್ಲ. ಏಡ್ಸ್ ಕಾಯಿಲೆಗೆ(ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣ ಕುಂದಿಸಿ, ರೋಗಗಳು/ಸೋಂಕು ಆಹ್ವಾನಕ್ಕೆ ದೇಹವನ್ನು ಸಂಪೂರ್ಣ ಮುಕ್ತಗೊಳಿಸುವ ಸ್ಥಿತಿ. ಮನುಷ್ಯ ಏಡ್ಸ್ ಕಾರದಿಂದಾಗಿಯೇ ಸಾಯದಿದ್ದರೂ, ಆತನ ದೇಹ ಸೇರುವ ಇತರೆ ರೋಗಗಳಿಂದ ಸಾಯುತ್ತಾನೆ. ಒಂದು ಹಂತದಲ್ಲಿ ಏಡ್ಸ್ ರೋಗಿಯ ದೇಹ ರೋಗಗಳ ಮುದ್ದೆಯಾಗಿರುತ್ತದೆ) ಕಾರಣವಾಗುವ ಎಚ್ಐವಿ ಸೋಂಕು ತಾಗುವ ಪ್ರತಿಯೊಬ್ಬ ವ್ಯಕ್ತಿಯೂ ಸಾಯುವುದು 100 ಪ್ರತಿಶತ ಖಚಿತ. ಶುಚಿತ್ವ ಹಾಗೂ ಔಷಧೋಪಚಾರಗಳ ಮೂಲಕ ರೋಗಿಯ ಸಾವನ್ನು ಒಂದಿಷ್ಟು ತಿಂಗಳು/ವರ್ಷ ಮುಂದೆ ತಳ್ಳಬಹುದೇ ಹೊರತು, ಆತನನ್ನು ಸಾವಿನ ದವಡೆಯಿಂದ ಪಾರು ಮಾಡುವುದು ಖಂಡಿತ ಸಾಧ್ಯವಿಲ್ಲ. ಪ್ಲೇಗ್, ಎಬೋಲಾ, ಎಚ್1ಎನ್1 ನಂತಹ ಸಾಂಕ್ರಾಮಿಕ ರೋಗಗಳು ತೀವ್ರ ಆತಂಕ ಸೃಷ್ಟಿಸಿದ್ದವಾದರೂ, ಒಂದು ಹಂತದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದು ತಣ್ಣಗಾಗಿವೆ. ಆದರೆ ಏಡ್ಸ್, ಔಷಧವಿಲ್ಲದ, ವಿಶ್ವಕ್ಕೆ ಅಂಟಿರುವ ಒಂದು ಶಾಶ್ವತ ರೋಗವಾಗಿ ಉಳಿದುಬಿಟ್ಟಿದೆ.

ಅದೇ ರೀತಿ ಜ್ವರ(ಫ್ಲೂ), ಮಲೇರಿಯಾ, ಡೆಂಗ್ಯೂ, ಎಬೋಲಾ, ಎಚ್1ಎನ್1, ಚಿಕನ್ಪಾಕ್ಸ್, ಮೇಸ್ಲೆಸ್ನಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ಔಷಧ/ಚಿಕಿತ್ಸೆ ಕಂಡುಹಿಡಿಯಲಾಗಿದೆಯಾದರೂ, ವಿಶ್ವ ಆ ವೈರಾಣುಗಳಿಂದ ಮುಕ್ತವಾಗಿಲ್ಲ. ಅದೇ ಕಾರಣಕ್ಕೆ ಜನ ಆಗಾಗ ಈ ರೋಗಗಳಿಗೆ ತುತ್ತಾಗುತ್ತಲೇ ಇರುತ್ತಾರೆ. ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸಂಭಾವ್ಯ ಅಪಾಯ/ಸಾವಿನಿಂದ ಪಾರಾಗುತ್ತಾರೆ. ಅದೇ ರೀತಿಯಾಗಿ ಈ Covid-19(ನಾವೆಲ್ ಕರೋನಾ) ಕೂಡ, ಇದಕ್ಕೆ ಪೂರ್ಣ ಪ್ರಮಾಣದ ಔಷಧ ಲಭ್ಯವಿಲ್ಲದಿದ್ದರೂ, ರೋಗ ಲಕ್ಷಣಗಳಿಗೆ(ಕಫ, ಮೂಗು ಸೋರುವಿಕೆ, ಜ್ವರ, ಎದೆ ಉರಿ, ಮೈ-ಕೈ ನೋವು) ನೀಡುವ ಚಿಕಿತ್ಸೆಯಿಂದ ರೋಗಿ ನಿಧಾನವಾಗಿಯಾದರೂ ಗುಣಮುಖವಾಗುತ್ತಿರುವುದರಿಂದ, ಸ್ವಲ್ಪ ಮಟ್ಟದಲ್ಲಿ ಆತಂಕ ತಗ್ಗಿದೆ. ಮುಂದಿನ ದಿನಗಳಲ್ಲಿ ಈ ಕರೋನಾಗೆ ಸೂಕ್ತ ಲಸಿಕೆ(ಸಂಭಾವ್ಯ ಸೋಂಕಿನಿಂದ ಪಾರಾಗಿಸಲು ಮೊದಲಿಗೇ ನೀಡುವುದು) ಅಥವಾ ಔಷಧ(ಸೋಂಕು ತಾಗಿದ ನಂತರ, ರೋಗ ತಗ್ಗಲು ನೀಡುವುದು) ಸಿದ್ಧವಾದರೂ ಪ್ರಪಂಚ ಮಾತ್ರ ವೈರಾಣು ಮುಕ್ತವಾಗುವುದಿಲ್ಲ ಎಂದು ವಿವಿಧ ದೇಶಗಳಲ್ಲಿ ನಡೆದ ಉನ್ನತ ಅಧ್ಯಯನಗಳು ಹೇಳುತ್ತಿವೆ.

ಇಲ್ಲಿ ಆತಂಕಕ್ಕೆ ಈಡುಮಾಡುವ ಸಂಗತಿ ಏನೆಂದರೆ ಮೇಲೆ ಹೇಳಿರುವ ಕಾಯಿಲೆಗಳು/ಸೋಂಕು ತಾಗಿದರೆ, ಮನುಷ್ಯ ತನ್ನ ರೋಗನಿರೋಧಕ ಶಕ್ತಿ ಹಾಗೂ ಪ್ರತಿಕಾಯ ಗುಣದ ಕಾರಣ ರೋಗಲಕ್ಷಣ ಕಾಣುವ ಮೊದಲೇ ರೋಗಮುಕ್ತ/ಸೋಂಕುಮುಕ್ತವಾಗುವ ಸಾಧ್ಯತೆ ಇರುತ್ತದೆ(ಕೆಲವು ಪ್ರಕರಣಗಳಲ್ಲಿ). ಆದರೆ ಕರೋನಾ ಹಾಗಲ್ಲ, ಅದರ ಹರಡುವಿಕೆ ವೇಗ/ಪ್ರಮಾಣ ಹಾಗೂ ಮನುಷ್ಯನಲ್ಪಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ(ಹೆಚ್ಚಿನ ಪ್ರಕರಣಗಳಲ್ಲಿ ರೋಗಲಕ್ಷಣ ಹಾಗೂ ಕಾಯಿಲೆ ಕಂಡುಬರುತ್ತದೆ), ಸುಳವಾಗಿ ಪಾರಾಗುವುದು ಸಾಧ್ಯವಿಲ್ಲ. ಸೇಡು ತೀರಿಸಿಕೊಳ್ಳಲು ಬಂದ ಶತೃವಿನಂತೆ, ಒಂದಷ್ಟು ಸಮಸ್ಯೆ/ನಷ್ಟ ಉಂಟುಮಾಡಿಯೇ ಅದು ಹೋಗುತ್ತದೆ. ಈ ಕಾರಣಕ್ಕಾದರೂ ಸಾರ್ವಜನಿಕರು ಹಾಗೂ ಸರ್ಕಾರ ಎಚ್ಚರಿಕೆಯಿದಿಂದಿದ್ದು, ರೋಗ ಹರಡುವಿಕೆಯಿಂದ ಪಾರಾಗಬೇಕಿದೆ. ಬಹುಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ ವಿವಿಧ ಕಾಯಿಲೆಗಳಿಂದ ಈಗಾಗಲೇ ಬಳಲುತ್ತಿರುವವರು ಹಾಗೂ ಶಕ್ತಿ ಹೀನತೆ/ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರು ಕರೋನಾ ಸೋಂಕಿಗೆ ಗುರಿಯಾದರೆ, ಅವರ ದೇಹದ ಮೇಲಾಗುವ ಪರಿಣಾಮದ ಪ್ರಮಾಣ ಹೆಚ್ಚಿರುತ್ತದೆ(ಉದಾಹರಣೆಗೆ ವಯೋವೃದ್ಧರು, ಮಕ್ಕಳು, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅಂಗಾಂಗ ಕಾಯಿಲೆ ಇರುವವರು). ಈವರೆಗೆ ದಾಖಲಾಗಿರುವ ಸಾವುಗಳಲ್ಲಿ ಇಂಥವರ ಪ್ರಮಾಣವೇ ಹೆಚ್ಚಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಂಥವರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಬದುಕಬೇಕಾಗುತ್ತದೆ(ಸೋಂಕು ತಾಗದಿರಲು) ಇಲ್ಲ ಕಾಯಿಲೆಗೆ ಗುರಿಯಾದರೆ ಎಲ್ಲಾ ವೈದ್ಯಕೀಯ ಹರಸಾಹಸಗಳಿಗೆ ಒಳಪಟ್ಟು ಹಾಗೋ-ಹೀಗೋ ಜೀವ ಉಳಿಸಿಕೊಳ್ಳಬೇಕಾಗುತ್ತದೆ.

ಮುಂದಿನ ಬದುಕು ಹೇಗೆ?
ಮುಂದಿನ ಒಂದೆರಡು ವರ್ಷಗಳ ಕಾಲ ಮನುಷ್ಯನ ಜೀವನ ಸಾಮಾನ್ಯದಂತೇನೂ ಇರುವುದಿಲ್ಲ. ಇದು ಕರೋನಾ ಹಾಗೂ ಮನುಷ್ಯ ಸಮಾಜದ ನಡುವಿನ ನಿರಂತರ ಸಂಘರ್ಷಕ್ಕೆ ಕಾರಣವಾಗಲಿದೆ. ದಿನೇದಿನೇ ರೋಗಿಗಳ ಪ್ರಮಾಣ ಹೆಚ್ಚುತ್ತಿರುವುದರಿಂದ, ಒಂದು ಹಂತದಲ್ಲಿ ಸರ್ಕಾರ ಕೈಚೆಲ್ಲಿ ಕುಳಿತುಕೊಳ್ಳುವ ಸಂದರ್ಭ ಎದುರಾದರೂ ಆಶ್ಚರ್ಯವಿಲ್ಲ(ರೋಗಿಗಳೇ ತಮ್ಮ ಜೀವ ಉಳಿಸಿಕೊಳ್ಳಬೇಕಾಗುತ್ತದೆ, ತಮ್ಮ ಜೀವಕ್ಕೆ ತಾವೇ ಜವಾಬ್ದಾರರಾಗಬೇಕಾಗುತ್ತದೆ). ಸೋಂಕಿಗೀಡಾದವರು ಸಾಮಾನ್ಯರ ರೀತಿ ಓಡಾಡಿಕೊಂಡಿರುವಂತಿಲ್ಲ, ಓಡಾಡಿದರೂ ಅವರಿಂದ ಇತರರಿಗೆ ಅಪಾಯ ತಪ್ಪಿದ್ದಲ್ಲ. ರೋಗಿಗಳು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಉಂಟಾಗುವುದರಿಂದ, ರೋಗ ಅಂಟಿಸಿಕೊಂಡರೆ ನಿಮಗೇ ತೊಂದರೆ. ಹಾಗಾಗಿ ಸಾಮಾಜಿಕ ಅಂತ ಕಾಪಾಡಿಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಅದೇ ರೀತಿಯಾಗಿ ಸರ್ಕಾರದ ಬಹುಪಾಲು ಹಣ ಬೆಡ್ಗಳನ್ನು ಹೆಚ್ಚಿಸಲು ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ವ್ಯಯವಾಗಲಿದೆ. ಮನುಷ್ಯ ಸಾರ್ವಜನಿಕ ಸ್ಥಳಗಳಲ್ಲಿ ತುಂಬಾ ಎಚ್ಚರಿಕೆಯಿಂದ(ಅತ್ಯವಶ್ಯವಿದ್ದಾಗ ಮಾತ್ರ ಹೊರಹೋಗುವುದು) ಇರಬೇಕಾಗುತ್ತದೆ, ಅನುಮಾನ ಬಂದಾಗಲೆಲ್ಲಾ ಕರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ(ಸಾಮಾನ್ಯ ಜ್ವರ ಬಂದರೂ Covid-19 ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಲಿದೆ). ಒಂದಷ್ಟು ಸಾಮಾಜಿಕ ಕ್ಷೇತ್ರಗಳು(ಶೈಕ್ಷಣಿಕ ಸಂಸ್ಥೆಗಳು, ಸಣ್ಣ-ದೊಡ್ಡ ಕೈಗಾರಿಕೆಗಳು, ಕಾರ್ಪೊರೇಟ್ ಕಂಪನಿಗಳು, ಸಾರಿಗೆ) ಸಾಮಾನ್ಯದಂತೆ ನಡೆದರೂ, ನಿರಾತಂಕವಾಗಿಯೇನೂ ಇರುವುದಿಲ್ಲ. ಅವುಗಳ ವೇಗಕ್ಕೆ ಬ್ರೇಕ್ ಬಿದ್ದು, ತುಂಬಾ ಆಲೋಚಿಸಿ/ಎಚ್ಚರಿಕೆಯಿಂದ ಕಾಲಿಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಮನುಷ್ಯನ ಸಾಮಾಜಿಕ ಬದುಕಾಗಲಿ, ದೇಶದ ಆರ್ಥಿಕ ಪರಿಸ್ಥಿತಿಯಾಗಲಿ ಮೊದಲಿನಂತ ಸಹಜವೇನೂ ಆಗುವುದಿಲ್ಲ. ಅದು ಕರೋನಾದೊಂದಿಗಿನ ಹೊಂದಾಣಿಕೆ ಬದುಕು ಮಾತ್ರ ಆಗಿರಲಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close