ಕರ್ನಾಟಕ ಸುದ್ದಿ

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಎಫ್ಐಆರ್: ಕಲಬುರ್ಗಿ ಜಿಲ್ಲಾಧಿಕಾರಿ ಎಚ್ಚರಿಕೆ

Posted By : Sirajudidn Bangar

Source : NS18

ಕೆಲವರು ಹೋಂ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಮೊದಲ ಬಾರಿಗೆ ಈ ರೀತಿಯಾಗಿ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಕೂಡಲೆ ಅಂಥವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ದಾಖಲಿಸಲಾಗುತ್ತದೆ.

ಕಲಬುರ್ಗಿ(ಮೇ 26): ದೇಶದ ವಿವಿಧ ರಾಜ್ಯಗಳಿಗೆ ಹೋಗಿದ್ದ ವಲಸಿಗರ ಆಗಮನ ನಿಂತಿಲ್ಲ. ದಿನೇ ದಿನೇ ತಮ್ಮ ಊರುಗಳಿಗೆ ವಾಪಸ್ಸಾಗೋ ಧಾವಂತದಲ್ಲಿದ್ದಾರೆ. ಹೀಗೆ ಬಂದವರ ಪೈಕಿ ಗರ್ಭಿಣಿ ಮಹಿಳೆಯರು, 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳಿಗೆ ಸಾಂಸ್ಥಿಕ ಕ್ವಾರಂಟೈನ್​ನಿಂದ ರಿಯಾಯಿತಿ ನೀಡಲಾಗಿದ್ದು, ಹೋಂ ಕ್ವಾರಂಟೈನ್​ಗೆ ಸೂಚಿಸಲಾಗಿದೆ. ಆದರೆ ಹಲವರು ಮನೆಯಲ್ಲಿ ಇರೋದು ಬಿಟ್ಟು, ಸಾರ್ವಜನಿಕವಾಗಿ ಅಡ್ಡಾಡುತ್ತಿದ್ದು, ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಣಮಿಸಿದ್ದಾರೆ. 

ಕಲಬುರ್ಗಿ ಜಿಲ್ಲೆಗೆ ಲಕ್ಷಾಂತರ ವಲಸಿಗರು ವಾಪಸ್ಸಾಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಮಹಾರಾಷ್ಟ್ರದಿಂದ ಬಂದಿದ್ದಾರೆ. ಆ ರಾಜ್ಯದಿಂದ 52 ಸಾವಿರ ವಲಸಿಗರು ಕಲಬುರ್ಗಿಗೆ ವಾಪಸ್ಸಾಗಿದ್ದಾರೆ. ತೆಲಂಗಾಣ ರಾಜ್ಯದಿಂದ 7 ಸಾವಿರ, ದೆಹಲಿ, ರಾಜಾಸ್ತಾನ, ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ 17 ಸಾವಿರ ವಲಸಿಗರು ಆಗಮಿಸಿದ್ದಾರೆ. ಬೆಂಗಳೂರು ಒಂದು ಕಡೆಯಿಂದಲೇ 27 ಸಾವಿರ ವಲಸಿಗರು ವಾಪಸ್ಸಾಗಿದ್ದಾರೆ. ಹೊರರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಆದರೆ ಆರೋಗ್ಯ ಸಮಸ್ಯೆ ಇದ್ದವರಿಗೆ, ಗರ್ಭಿಣಿಯರಿಗೆ, 10 ವರ್ಷದೊಳಗಿನ ಮಕ್ಕಳಿಗೆ, 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಸಾಂಸ್ಥಿಕ ಕ್ವಾರಂಟೈನ್​ನಿಂದ ರಿಯಾಯಿತಿ ನೀಡಲಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ.

ಹೋಂ ಕ್ವಾರಂಟೈನ್​ನಲ್ಲಿದ್ದರ ಪೈಕಿ ಕೆಲವರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳು ಗೃಹ ಬಂಧನ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡಿದಲ್ಲಿ ಅಂತಹವರ ಮೇಲೆ ಪೊಲೀಸ್‌ ಠಾಣೆಯಲ್ಲಿ ಎಫ್.ಐ.ಆರ್.ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿ ಬಂದ ವ್ಯಕ್ತಿಗಳು, ಹೊರ ರಾಜ್ಯದಿಂದ ಬಂದ ಗರ್ಭಿಣಿ ಮಹಿಳೆಯರು, 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು ಇನ್ನಿತರ ರೋಗಗಳಿಂದ ಬಳಲುತ್ತಿರುವವರ ಹಿತದೃಷ್ಟಿಯಿಂದ ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಹೋಂ ಕ್ವಾರಂಟೈನ್​ನಲ್ಲಿ ಇಡಲಾಗುತ್ತಿದೆ. ಆದರೆ ಕೆಲವರು ಹೋಂ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಮೊದಲ ಬಾರಿಗೆ ಈ ರೀತಿಯಾಗಿ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಕೂಡಲೆ ಅಂಥವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ದಾಖಲಿಸಲಾಗುತ್ತದೆ. ತದನಂತರ‌ವೂ ಮೇಲಿಂದ‌ ಮೇಲೆ ಇದೇ ರೀತಿ ತಪ್ಪು ಮರುಕಳಿಸಿದಲ್ಲಿ ಅಂತಹವರ ಮೇಲೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗುವುದು ಎಂದು ಕಲಬುರ್ಗಿ ಡಿಸಿ ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.

ಹೋಂ ಕ್ವಾರಂಟೈನ್​ನಲ್ಲಿದ್ದರ ಮೊಬೈಲ್ ಜಿಪಿಎಸ್ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಅವರು ನಿಗದಿತ ಸ್ಥಳ ಬಿಟ್ಟು ಹೊರಗೆ ಬಂದಲ್ಲಿ ಜಿಲ್ಲಾಡಳಿತಕ್ಕೆ ಸಂದೇಶ ರವಾನೆಯಾಗುತ್ತಿದೆ. ಪದೇ ಪದೇ ನಿಯಮ ಉಲ್ಲಂಘನೆ ಘಟನೆಗಳು ನಡೆಯುತ್ತಿರುವುದರಿಂದಾಗಿ ಜಿಲ್ಲಾಡಳಿತ ಮೊದಲ ಎಚ್ಚರಿಕೆ ನೀಡಿದೆ. ಸುಧಾರಿಸಿಕೊಳ್ಳದೇ ಇದ್ದಲ್ಲಿ ದೂರು ದಾಖಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲೂ ಮುಂದಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close