ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿಸಿರವಾರ

ಬಾವಲಿಯ ಅಂತರಂಗ ಮತ್ತು ಕರೋನಾ

— ವಿಜಯ್.ಎ.ಸರೋದೆ ಸಿರವಾರ

ಬಾವಲಿಯ ಅಂತರಂಗ ಮತ್ತು ಕರೋನಾ

ಕೆಲ ತಿಂಗಳುಗಳ ಹಿಂದೆ ಕರೋನಾ ಆತಂಕ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಸತ್ಯಾಸತ್ಯತೆಗಳನ್ನು ಅರಿಯಲು ಭಾರತೀಯ ಔಷಧ ಸಂಶೋಧನಾ ಮಂಡಳಿ(ಐಸಿಎಮ್ಆರ್) ಬಾವಲಿಗಳ ಮೇಲೆ ಸಂಶೋಧನೆಯೊಂದನ್ನು ನಡೆಸಿತ್ತು. Covid-19ಗೆ ಹೋಲುವ ವೈರಸ್ ಒಂದು ಬಾವಲಿಗಳಲ್ಲಿ ಪತ್ತೆಯಾಗಿದ್ದರಿಂದ, ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಈ ರೋಗದ ಮೂಲ ಬಾವಲಿ ಆಗಿರಲೂಬಹುದು ಎಂಬ ವರದಿ ನೀಡಿತ್ತು. ಚೀನಾ ಕೂಡ ತನ್ನ ಮೇಲಿರುವ ಆರೋಪಗಳಿಂದ ಪಾರಾಗಲು ಯತ್ನಿಸುತ್ತಿದ್ದಾದ್ದರಿಂದ, ಇದು ಪ್ರಾಣಿಗಳಿಂದ ಮನುಷ್ಯನಿಗೆ ಬಂದಿದ್ದು‌(ಮಾಂಸಾಹಾರ ಸೇವನೆಯಿಂದ) ಲ್ಯಾಬ್ನಿಂದ ಸೋರಿಕೆಯಾಗಿದ್ದಲ್ಲ ಎಂದು ಜೋರಾಗಿ ಹೇಳುತ್ತಿತ್ತು. ಈ ಸಂದರ್ಭದಲ್ಲಿ ಸಹಜವಾಗಿ ಬಾವಲಿಗಳ ಮೇಲೆ ಮನುಷ್ಯನ ಕೆಂಗಣ್ಣು ಬಿದ್ದು, ಒಂದಷ್ಟು ಸ್ಥಳಗಳಲ್ಲಿ ಅವುಗಳ ಮಾರಣಹೋಮ ಕೂಡ ನಡೆಯಿತು. ಬಾವಲಿ ವೈರಸ್ನ ಸೂಪರ್ ಸ್ಪ್ರೆಡರ್ ಆಗಿರಬಹುದು, ಮನುಷ್ಯ ವಾಸಿಸುವ ಜಾಗದಲ್ಲಿ ಅವು ಹಾರಾಡುವುದರಿಂದ ಗಾಳಿಯ ಮೂಲಕ ನೇರವಾಗಿ ವೈರಸ್ನ ಸೋಂಕು ನಮಗೂ ತಗಬಹುದು ಎಂಬ ಆತಂಕ ಸಾಕಷ್ಟು ಜನರಲ್ಲಿ ಮನೆ ಮಾಡಿತ್ತು. ಈ ಸುದ್ದಿ ಹೊರಬಿದ್ದಬಳಿಕ ರಾಜಸ್ಥಾನದಲ್ಲಿ 150 ಬಾವಲಿಗಳನ್ನು ಕೊಲ್ಲಲಾಯಿತು, ಬೆಂಗಳೂರಿನ ಸಾಕಷ್ಟು ಮನೆಗಳಿಂದ ಮನೆಯ ಎದುರಿಗಿನ ಮರಗಳಲ್ಲಿರುವ ಬಾವಲಿಗಳನ್ನು ಓಡಿಸಿ ಎಂಬ ಕರೆಗಳು ಬಿಬಿಎಂಪಿಗೆ ಬರತೊಡಗಿದವು, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಇಂಡೋನೇಷ್ಯಾದಿಂದಲೂ(ಇದೊಂದೇ ರಾಷ್ಟ್ರದಲ್ಲಿ ಸಾವಿರಕ್ಕೂ ಹೆಚ್ಚು ಬಾವಲಿಗಳನ್ನು ಕೊಲ್ಲಲಾಗಿದೆ) ಇಂತಹ ಅನೇಕ ಮಾರಣಹೋಮದ ಸುದ್ದಿಗಳು ದಾಖಲಾದವು.

ಹಾಗಿದ್ದರೆ Covid-19 ಹಾಗೂ ಬಾವಲಿಗಳ ನಡುವೆ ನೇರ ಸಂಬಂಧ ಇದಿಯಾ? ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕರೋನಾದ ಮೂಲ ಬಾವಲಿಯಾ? ಎಂಬ ಸತ್ಯಾಸತ್ಯತೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಪರಿಶೀಲಿಸುವುದಾದರೆ. ವಿಜ್ಞಾನಿಗಳು ಹೇಳುವ ಪ್ರಕಾರ ವಿಶ್ವಾದ್ಯಂತ 1400 ಪ್ರಜಾತಿಯ ಬಾವಲಿಗಳಿದ್ದು, ಅದರಲ್ಲಿ ಕರೋನಾದಂತಹ ವೈರಸ್ ಕಂಡುಬಂದಿರುವುದು ಕೇವಲ ಒಂದು ಪ್ರಜಾತಿಯಲ್ಲಿ ಮಾತ್ರ. ಬಾವಲಿಗಳು ಶುದ್ಧ ಕಾಡುಪ್ರಾಣಿ(ಹಾರುವ ಜೀವಿಯಾಗಿದ್ದರೂ ಇದು ಹಕ್ಕಿಯಲ್ಲ, ನೋಡಲು ವಿಲಕ್ಷಣವಾಗಿದ್ದರೂ ಕೀಟ ಜಾತಿಗೆ ಸೇರಿದ್ದಲ್ಲ. ಇದೊಂದು ಹಾರುವ ಸಸ್ತನಿ). ಇವು ಹೆಚ್ಚಾಗಿ ಕಾಡಿನಲ್ಲಿ ವಾಸಿಸುತ್ತವೆ ಮತ್ತು ಮನುಷ್ಯ ವಸತಿಯ ಹತ್ತಿರ ಇದ್ದರೂ ಇವು ಮನುಷ್ಯನ ನೇರ ಸಂಪರ್ಕಕ್ಕೆ ಬರುವುದಿಲ್ಲ. ಅವು ಮನುಷ್ಯನನ್ನು ಕಂಡರೆ ತುಂಬ ಹೆದರುತ್ತವಂತೆ(ಬಾವಲಿಗಳು ಸೊಳ್ಳೆಯಂತೆ ಮನುಷ್ಯನ ರಕ್ತ ಹೀರುತ್ತವೆ, ಕತ್ತಲಲ್ಲಿ ಅವುಗಳ ಹತ್ತಿರ ಬಂದರೆ ಕಣ್ಣು ಕೀಳುತ್ತವೆ ಎಂಬುದೆಲ್ಲಾ ಕಟ್ಟುಕಥೆ). ಇವು ಮನುಷ್ಯನನ್ನು ಕಂಡರೆ ದೂರವೇ ಇರುತ್ತಾವಾದ್ದರಿಂದ ಜನವಸತಿ ಪ್ರದೇಶದಲ್ಲಿ ವಾಸವಿದ್ದರೂ ಮನುಷ್ಯನೊಂದಿಗೆ ಹೊಂದಿಕೊಳ್ಳದ ಗಾಡು ಗುಣದ ಪ್ರಾಣಿ, ಅವುಗಳನ್ನು ಸಾಕುವುದು-ಸಲಹುವುದು ಸಾಧ್ಯವಿಲ್ಲ. ಅದರ ವಿಲಕ್ಷಣ ದೇಹ, ಮನುಷ್ಯನ ಸಂಪರ್ಕಕ್ಕೆ ಬರದೇ ಇರುವ ಗುಣ ಸಹಜವಾಗಿ ಅದು ನಮ್ಮ ಕಣ್ಣಿಗೆ ನಿಗೂಢವಾಗಿ ಕಾಣುವಂತೆ ಮಾಡಿದೆ.

ಮನುಷ್ಯ ನಿಗೂಢವಾಗಿರುವ ಸಂಗತಿಗಳ ಬಗ್ಗೆ ಸಾಕಷ್ಟು ಕುತೂಹಲ ಹೊಂದಿರುತ್ತಾನೆ, ಹಾಗೇ ಇಂತಹ ಕುತೂಹಲಗಳನ್ನು ತಣಿಸಿಕೊಳ್ಳಲು ಅನೇಕ ಕಲ್ಪನೆಗಳನ್ನೂ ಕಟ್ಟಿಕೊಳ್ಳುತ್ತಾನೆ. ಇದೇ ಕಾರಣಕ್ಕೆ ಬಾವಲಿಗಳು ಮನುಷ್ಯನ ಕಣ್ಣಿಗೆ ಹಾರುವ ಪ್ರೇತದಂತೆ, ರಕ್ತ ಹೀರುವ ರಾಕ್ಷಸನಂತೆ, ಮರದ ಮೇಲೆ ಜೋತುಬಿದ್ದ ಆತ್ಮದಂತೆ ಕಾಣುತ್ತದೆ. ಕಾದಂಬರಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಅಮಾನುಷ ಶಕ್ತಿಯಾಗಳು-ಪ್ರೇತಗಳ ಕಲ್ಪನೆ ಕಟ್ಟಿಕೊಡುವಾಗ ಬಾವಲಿಗಳನ್ನು ತೋರಿಸಲಾಗುತ್ತಾದ್ದರಿಂದ ಸಹಜವಾಗಿ ನಮ್ಮ-ನಿಮ್ಮಲ್ಲಿ ಅದರ ಬಗ್ಗೆ ಆತಂಕ-ಭಯ ಹೆಚ್ಚುವಂತೆ ಮಾಡಿದೆ. ಇದೇ ಬಗೆಯ ಆತಂಕ, ಅದರೆಡೆಗಿನ ಭಯ-ತಿರಸ್ಕಾರ-ದ್ವೇಷ ಬಾವಲಿಯನ್ನು ಕರೋನಾ ಹರಡಿದ ಆರೋಪಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.

ಆದರೆ ಕರೋನಾ ವಿಚಾರವಾಗಿ ಒಂದಷ್ಟು ವೈಜ್ಞಾನಿಕ ಅಂಶಗಳನ್ನು ನೋಡುವುದಾದರೆ ಕರೋನಾ ವೈರಸ್ ಬಾವಲಿಗಳಿಂದ ಹಬ್ಬಿದೆ ಎಂಬುದು ಈವರೆಗಿನ ಒಂದು ಊಹೆ ಮಾತ್ರ. ಅದೇ ಸತ್ಯ ಎಂದು ಯಾವೊಂದು ಸಂಶೋಧನೆಯೂ ಇಲ್ಲಿಯವರೆಗೆ ದೃಢಪಡಿಸಿಲ್ಲ. ಬಾವಲಿ ಪ್ರಜಾತಿಯೊಂದರಲ್ಲಿ ಕರೋನಾಕ್ಕೆ ಹೋಲುವ ವೈರಸ್ ಕಂಡುಬಂದಿರುವುದರಿಂದ, ಹಾಗಾಗಿರಬಹುದು ಎಂದು ನಂಬಲಾಗಿದೆ ಅಷ್ಟೇ! ಅದಕ್ಕೂ ಮುಂದುವರಿದು ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ. ಮನುಷ್ಯನಿಗೆ ನೇರವಾಗಿ ಬಾವಲಿಯಿಂದ ಕರೋನಾ ಹರಡದಿದ್ದರೂ, ಅದರ ಸಂಪರ್ಕಕ್ಕೆ ಬಂದು(ಬಾವಲಿಯನ್ನು ಬೇಟೆಯಾಡಿರುವ) ಸೋಂಕಿಗೆ ಗುರಿಯಾಗಿರುವ ಪ್ರಾಣಿಯನ್ನು ಮನುಷ್ಯ ತಿಂದು, ಸಮಸ್ಯೆಗೆ ಬಲಿಯಾಗಿರಬಹುದು ಎಂದು ಊಹಿಸಲಾಗಿದೆ. ಬಾವಲಿಯಿಂದ ಪ್ಯಾಂಗೋಲಿನ್ ಎಂಬ ಕಾಡುಪ್ರಾಣಿಗೆ ಸೋಂಕು ಹರಡಿ(ಜೀವಿಯಿಂದ ಜೀವಿಗೆ ಕರೋನಾ/ವೈರಸ್ ಹರಡುವಾಗ, ಆ ಜೀವಿಯ ದೇಹಕ್ಕೆ ತಕ್ಕಂತೆ ವೈರಸ್ನ ವಂಶವಾಹಿ ಹಾಗೂ ಕಾರ್ಯಗುಣದಲ್ಲಿ ಬದಲಾವಣೆಗಳು ಉಂಟಾಗುತ್ತದೆ. ಅದೇ ರೀತಿ ಬಾವಲಿಯಲ್ಲಿ ಕಂಡುಬಂದ ವೈರಸ್ಗೂ ಮನುಷ್ಯನಲ್ಲಿ ಕಂಡುಬಂದ ವೈರಸ್ಗೂ ಒಂದಷ್ಟು ವ್ಯತ್ಯಾಸಗಳಿವೆ, ಆದರೆ ಎರಡೂ ಒಂದೇ ಅಲ್ಲ).

ಕೈರೋಪ್ಟೆರಾಲಜಿ
ಬಾವಲಿಗಳನ್ನು ಅಧ್ಯಯನ ಮಾಡುವ ಪ್ರಾಣಿಜೀವಶಾಸ್ತ್ರದ ಶಾಖೆಯನ್ನು ಕೈರೋಪ್ಟೆರಾಲಜಿ ಎಂದು ಕರೆಯಲಾಗುತ್ತದೆ. ಬಾವಲಿಗಳ ಪ್ರಜಾತಿ, ಅವುಗಳ ದೇಹಲಕ್ಷಣ, ಜೀವನಶೈಲಿ, ಪ್ರಕೃತಿಯಲ್ಲಿ ಅವುಗಳ ಪಾತ್ರ ಮತ್ತು ಪ್ರಾಮುಖ್ಯತೆ(ಕೊಡುಗೆ) ಸೇರಿದಂತೆ ಅನೇಕ ಸಂಗತಿಗಳನ್ನು ಈ ಶಾಸ್ತ್ರದಲ್ಲಿ ಅಧ್ಯಯನ ಮಾಡಲಾಗುತ್ತದೆ. ಬಾವಲಿ ನೋಡಲು ವಿಲಕ್ಷಣವಾಗಿದ್ದರೂ, ಅದು ರೈತಮಿತ್ರ ಅನ್ನೋದು ಅಷ್ಟೇ ಸತ್ಯ. ಬಾವಲಿಗಳು ಹೊಲ ಹಾಗೂ ತೋಟಗಳಲ್ಲಿ ಬೆಳೆಗಳಿಗೆ ಸಮಸ್ಯೆ ಉಂಟುಮಾಡುವ ಸಣ್ಣ-ದೊಡ್ಡ ಕೀಟಗಳನ್ನು ತಿನ್ನುತ್ತವೆ, ಹೂಗಳ ಪರಾಗಸ್ಪರ್ಶ ಕ್ರಿಯೆಗೂ ಇವು ಸಹಕಾರಿಯಾಗಿರುವುದರಿಂದ ಇದನ್ನು ರೈತ ಸ್ನೇಹಿ ಜೀವಿಯೆಂದೇ ತಿಳಿಯಲಾಗಿದೆ. ಇದೇ ಕಾರಣಕ್ಕೆ ಅಮೆರಿಕ, ಕೆನಡಾ ಸೇರಿದಂತೆ ಅನೇಕ ರಾಷ್ಟ್ರಗಳು ಇವುಗಳ ಬಗ್ಗೆ ಸಂಶೋಧನೆಗಳು ನಡೆದಿವೆ. ಇಂಡೋನೇಷ್ಯಾದ ಕೋಕುವಾ ಬೆಳೆಗಾರರಿಗೆ ಬಾವಲಿ ವರಪ್ರದವಾಗಿದ್ದು, ಬೆಳೆಗೆ ಕಾಡುವ ಕೀಟಬಾಧೆಯನ್ನು ತಡೆದು, ಕೀಟನಾಶಕಗಳ ಬಳಕೆಗೆ ವರ್ಷವೊಂದಕ್ಕೆ ವ್ಯಯವಾಗಬಹುದಾದ ಒಟ್ಟಾರೆ 8 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಉಳಿತಾಯ ಮಾಡಿದೆಯಂತೆ. ಅದೇ ರೀತಿ ಅಮೆರಿಕದ ಮೆಕ್ಕೆಜೋಳ ಬೆಳೆಗಾರರ ಪ್ರತಿವರ್ಷ 22 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಉಳಿತಾಯ ಮಾಡುತ್ತಿದೆ ಎಂದು ಅಲ್ಲಿನ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ರೋಗನಿರೋಧಕ ಶಕ್ತಿ ಹೆಚ್ಚು
ಬಾವಲಿಗಳು ಅನೇಕ ಬಗೆಯ ಕೀಟ ಹಾಗೂ ಸಸ್ಯ-ಹಣ್ಣು-ಕಾಯಿಗಳನ್ನು ತಿನ್ನುತ್ತಾವಾದ್ದರಿಂದ ಅವುಗಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಕೀಟಗಳಿಂದ ತಗಲಬಹುದಾದ ಸೋಂಕಿಗೆ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡಬಲ್ಲ ಪ್ರತಿಕಾಯ ಶಕ್ತಿ ಅವುಗಳಲ್ಲಿರುವುದರಿಂದ, ವಿಜ್ಞಾನಿಗಳಿಗೂ ಇದು ಕುತೂಹಲಕಾರಿಯಾದ ಸಂಗತಿಯಾಗಿದೆ. ಬಾವಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು ಕಾರಣವಾಗಿರುವ ಅಂಶಗಳಾವುವು? ಅವುಗಳ ಅಂಗಾಂಗರಚನೆ ಹಾಗೂ ಆಹಾರ ಕ್ರಮ ಹೇಗಿದೆ ಎಂಬೆಲ್ಲಾ ಅಂಶಗಳನ್ನು ಅರಿಯಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಬಾವಲಿಗಳು ಮನುಷ್ಯನಿಂದ ಅಂತರ ಕಾಯ್ದುಕೊಳ್ಳುವ(ಸೋಶಿಯಲ್ ಡಿಸ್ಟೆನ್ಸ್!) ಜೀವಿಯಾಗಿರುವುದರಿಂದ, ಕರೋನಾ ಸೋಂಕು ತಾಗಲು ಅದು ನೇರ ಕಾರಣ ಅಲ್ಲ. ಮನುಷ್ಯ ಕಳ್ಳಬೇಟೆಯಾಡುವ ಪ್ಯಾಂಗೋಲಿನ್ನಂತಹ ಜೀವಿಯಿಂದ ವೈರಸ್ ಹರಡಿರಬಹುದು. ಹಾಗೇ ಬಾವಲಿ ತಿಂದು, ಬಿಸಾಡಿರುವ ಹಣ್ಣು-ಕಾಯಿಯನ್ನು ಮನುಷ್ಯ ತಿಂದಾಗ ಮಾತ್ರ ಅವುಗಳಲ್ಲಿರುವ ಕೆಲವು ಬಗೆಯ ವೈರಸ್ ಮನುಷ್ಯನಿಗೆ ತಗಲುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

  • ವಿಜಯ್.ಎ.ಸರೋದೆ, ಪತ್ರಕರ್ತ ಹಾಗೂ ಪತ್ರಿಕೋದ್ಯಮ ಅತಿಥಿ ಪ್ರಾಧ್ಯಾಪಕ
Continue

Related Articles

Leave a Reply

Your email address will not be published. Required fields are marked *

Back to top button
Close
Close