ರಾಯಚೂರು ಜಿಲ್ಲೆ ಸುದ್ದಿ

ರಾಜ್ಯದೆಲ್ಲೆಡೆ ಇಂದು ರಂಜಾನ್ ಹಬ್ಬ

ವರದಿ: ಸಿರಾಜುದ್ದೀನ್ ಬಂಗಾರ್

ಸಿರವಾರ: ಮೇ 25: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ ಮೇಲೆ ಕೋವಿಡ್  ಕರಿನೆರಳು ಬೀರಿದೆ. ಹೊಸ ಬಟ್ಟೆ ಖರೀದಿಸಿ ಸಂಭ್ರಮಿಸುತ್ತಿದ್ದವರ ಮೊಗದಲ್ಲಿ ಮಂಕು ಕವಿದಿದೆ. ಮನೆಯೊಳಗೆ ಹಬ್ಬವನ್ನು ಸರಳವಾಗಿ ಆಚರಿಸಲು ಮುಸ್ಲಿಮರು ಸಜ್ಜಾಗಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್‌ ಕೂಟಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಕಾಣದ ಸಂಭ್ರಮ: ರಂಜಾನ್‌ ಮುಸ್ಲಿಮರ ದೊಡ್ಡ ಹಾಗೂ ಶ್ರೇಷ್ಠ ಹಬ್ಬ. ತಿಂಗಳ ಪೂರ್ತಿ ಉಪವಾಸ, ಪ್ರಾರ್ಥನೆ, ದಾನ-ಧರ್ಮ ಮಾಡಿ ಆಚರಿಸುವ ಪವಿತ್ರ ಹಬ್ಬ. ರಂಜಾನ್‌ ಮಾಸದುದ್ದಕ್ಕೂ ಖರೀದಿ, ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಇಫ್ತಾರ್‌ ಕೂಟಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಹಬ್ಬದ ಸಂಭ್ರಮವನ್ನೇ ಕೋವಿಡ್ ಕಸಿದಿದೆ.

ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಮುಸ್ಲಿಂ ಮುಖಂಡರು. ಹಬ್ಬವನ್ನು ಸರಳವಾಗಿ ಆಚರಿಸುವ ನಿಟ್ಟಿನಲ್ಲಿ 15 ದಿನಗಳ ಹಿಂದೆಯೇ ಪ್ರಮುಖ ಮುಖಂಡರು ನಿರ್ಧಾರ ತೆಗೆದುಕೊಂಡಿದ್ದರು. ಅಂತೆಯೇ ವರ್ತಕರು, ಅಂಗಡಿಗಳ ಮಾಲೀಕರು ರಂಜಾನ್‌ ಮುಗಿಯುವ ವರೆಗೆ ಬಟ್ಟೆ, ಚಪ್ಪಲಿ ಅಂಗಡಿಗಳನ್ನು ತೆರೆಯದಿರಲು ನಿರ್ಣಯ ಕೈಗೊಂಡಿದ್ದರು. ಕೆಲ ವರ್ತಕರು ಅಂಗಡಿಗಳಿಗೆ ಅವಕಾಶ ನೀಡಬೇಕೆಂದು ಕೋರಿದ್ದರು. ಆದರೆ, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಮೇಲಾಗಿ ರವಿವಾರ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ನಗರ ಸ್ತಬ್ಧಗೊಂಡಿತ್ತು. 

ರಂಜಾನ್‌ ಹಬ್ಬವನ್ನು ಸರಳವಾಗಿ ಮನೆಯಲ್ಲೇ ಆಚರಿಸಲು ತಯಾರಿ ನಡೆದಿದೆ. ಪ್ರಾರ್ಥನೆ ಸಹ ಮನೆಯಲ್ಲೇ ನಡೆಯಲಿದ್ದು, ಮಸೀದಿಗಳಲ್ಲಿ ಮೌಲ್ವಿಗಳು ಹಾಗೂ ಸಿಬ್ಬಂದಿ ಮಾತ್ರವೇ (ಐದರಿಂದ ಆರು ಜನ) ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇಸ್ಲಾಂ ಧರ್ಮ ಹೇಳುವುದು ಜೀವ ರಕ್ಷಣೆಯ ಬಗ್ಗೆಯೇ. ಅದರಂತೆ ಸರ್ಕಾರ ಸಹಿತ ಲಾಕ್‌ ಡೌನ್‌ ಜಾರಿ ಮಾಡಿದೆ. ಆದ್ದರಿಂದ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. 

  ಈದ್ ಶುಭಾಶಯ ತಿಳಿಸಿದ ರಾಜಕೀಯ ನಾಯಕರು:

‘ಈದ್-ಉಲ್-ಫಿತರ್ ಅವರಿಗೆ ಶುಭಾಶಯಗಳು. ಈ ವಿಶೇಷ ಸಂದರ್ಭವು ಸಹಾನುಭೂತಿ, ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಎಲ್ಲರೂ ಆರೋಗ್ಯವಂತರು ಮತ್ತು ಸಮೃದ್ಧರಾಗಿರಲಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಈದ್ ಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ನಿಮ್ಮೆಲ್ಲರಿಗೂ ಈದ್‌ ಮುಬಾರಕ್ ಎಂದಿದ್ದಾರೆ.


“ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ  ಈ ಹಬ್ಬವು ಬದುಕಿನಲ್ಲಿ ನೆಮ್ಮದಿ, ಸಂತೋಷ ತರಲಿ. ರಂಜಾನ್ ತಿಂಗಳಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಮನೆಯಲ್ಲೇ ಪ್ರಾರ್ಥನೆ ನಡೆಸಿ, ಮುನ್ನೆಚ್ಚರಿಕೆ ವಹಿಸಿ ಸಹಕರಿಸಿದ ಎಲ್ಲ ಮುಸಲ್ಮಾನ ಬಂಧುಗಳಿಗೆ ಅಭಿನಂದನೆಗಳು,” ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಮುಸ್ಲಿಮರಿಗೆ ಸಂದೇಶ ರವಾನೆ ಮಾಡಿದ್ದಾರೆ. ‘ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಶುದ್ಧಿಗೊಳಿಸುವ ಪವಿತ್ರ ರಂಜಾನ್ ಹಬ್ಬ ಶುಭತರಲಿ. ರಂಜಾನ್ ಎಂದರೆ ಕೇವಲ ಉಪವಾಸ ಮಾತ್ರವಲ್ಲ. ಅರ್ಹರಿಗೆ, ಅಗತ್ಯವಿರುವವರಿಗೆ ದಾನ, ಧರ್ಮ ಮಾಡಿ ಆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವುದಾಗಿದೆ. ಸದ್ಯ ಜಗತ್ತಿನಲ್ಲಿ ಮಾನವಕುಲಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಮೆಟ್ಟಿನಿಲ್ಲಬೇಕಿದೆ. ಭಾರತ ಸರ್ವ ಧರ್ಮಗಳ ಭೂಮಿಯಾಗಿದ್ದು, ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕಲು ಈ ಹಬ್ಬ ವೇದಿಕೆಯಾಗಲಿ’ ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.

ಶುಭಾಶಯ ಕೋರಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ಪವಿತ್ರ ಈದ್ ಉಲ್ ಫಿತರ್ ಹಬ್ಬ ಸಾರುವ ಸ್ನೇಹ, ತ್ಯಾಗ ಮತ್ತು ಭಾತೃತ್ವದ ಸಂದೇಶವನ್ನು ಅರಿತು ಅಳವಡಿಸಿಕೊಂಡು ನಾವೆಲ್ಲ ಬಾಳೋಣ. ನಾಡಿನ ನನ್ನ‌ ಎಲ್ಲ ಮುಸ್ಲಿಮ್ ಸಮುದಾಯದವರಿಗೆ ಹಬ್ಬದ ಶುಭಾಶಯಗಳು, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close