ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ರೆಪೊ ದರ ಶೇಕಡಾ 4ಕ್ಕೆ, ರಿವರ್ಸ್ ರೆಪೊ ದರ ಶೇ.3.35ಕ್ಕೆ ಇಳಿಕೆ:ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

Posted By: Sirajuddin Bangar

Source: NS18

ನವದೆಹಲಿ(ಮೇ 22): ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇವತ್ತು ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಟಿ ನೀಡಲು ವಿವಿಧ ಕ್ರಮಗಳನ್ನು ಘೋಷಿಸಿದ್ದಾರೆ. ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಅಂದರೆ ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇ. 3.35ಕ್ಕೆ ಇಳಿಸಲಾಗಿದೆ.

ಏನಿದು ರೆಪೋ, ರಿವರ್ಸ್ ರೆಪೋ?:
ರೆಪೋ ದರ ಎಂದರೆ ರಿಸರ್ವ್ ಬ್ಯಾಂಕ್ ಸಂಸ್ಥೆ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ರಿವರ್ಸ್ ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಲ್ಲಿ ಠೇವಣಿ ಇಡುವ ಹಣಕ್ಕೆ ಆರ್​ಬಿಐ ಕೊಡುವ ಬಡ್ಡಿಯ ದರವಾಗಿರುತ್ತದೆ.

ಸಾಲ ಮರುಪಾವತಿಗೆ ಕಾಲಾವಕಾಶ ಇನ್ನೂ 3 ತಿಂಗಳು ವಿಸ್ತರಣೆ: 

ಲಾಕ್ ಡೌನ್ ಘೋಷಣೆಯಾದ ಬಳಿಕ ಸಾಲದ ಕಂತುಗಳನ್ನು ಕಟ್ಟುವುದನ್ನು ಮೂರು ತಿಂಗಳು ಮುಂದೂಡಿದ್ದ ಆರ್​​ಬಿಐ ಇದೀಗ ಇನ್ನೂ 3 ತಿಂಗಳು ಮುಂದಕ್ಕೆ ಹಾಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸಣ್ಣ ಉದ್ಯಮಗಳ ಹಿತದೃಷ್ಟಿಯಿಂದ ಶಕ್ತಿಕಾಂತ ದಾಸ್ ಈ ಕ್ರಮ ಕೈಗೊಂಡಿದ್ದಾರೆ. ಮೂರು ತಿಂಗಳಾದ ಬಳಿಕ ಒಟ್ಟಾರೆ ಆರು ತಿಂಗಳು ಬಾಕಿ ಉಳಿದ ಕಂತುಗಳ ಮೇಲಿನ ಬಡ್ಡಿ ಸೇರಿಸಿ ಸಾಲ ಪಾವತಿ ಮಾಡಬೇಕಾಗುತ್ತದೆ.

ಇವತ್ತು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​ಬಿಐ ಗವರ್ನರ್, ಒಂದು ಸಣ್ಣ ವೈರಸ್ ಹೇಗೆ ಜಗತ್ತಿನಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆಮೀರಿ ತೀರಾ ಸಂಕಷ್ಟಕ್ಕೆ ಸಿಲುಕಿದೆ ಎಂದ ಅವರು ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ ಎಂದರು.ಕಚ್ಛಾ ತೈಲದ ಬೆಲೆ ಕಡಿಮೆಯಾಗಿರುವುದು ಆದಾಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಆಹಾರ ಹಣದುಬ್ಬರ ಪ್ರಮಾಣವು ಏಪ್ರಿಲ್​ನಲ್ಲಿ ಶೆ. 8.6ಕ್ಕೆ ಹೆಚ್ಚಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.

ಲಾಕ್ ಡೌನ್ ನಂತರ ಖಾಸಗಿ ಭೋಗದ ಪ್ರಮಾಣ ಕಡಿಮೆ ಆಗಿದೆ. ಔದ್ಯಮಿಕ ಉತ್ಪಾದನೆಗೂ ಹೊಡೆತ ಬಿದ್ದಿದೆ. ಹೂಡಿಕೆ ಅವಕಾಶಕ್ಕೂ ಸಂಚಕಾರವಾಗಿದೆ. ಆಮದು ಕೂಡ ಶೇ. 58ರಷ್ಟು ತಗ್ಗಿದೆ ಎಂದು ಸಂಕಷ್ಟಗಳ ವಿವರ ನೀಡಿದರು.

ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ಬಳಿಕ ಆರ್​ಬಿಐ ಗವರ್ನರ್ ಅವರು ಪತ್ರಿಕಾ ಗೋಷ್ಠಿ ನಡೆಸುತ್ತಿರುವುದು ಇದು ಮೂರನೇ ಬಾರಿ. ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಳಿಕ ಅವರು ನಡೆಸಿದ ಮೊದಲ ಪತ್ರಿಕಾ ಗೋಷ್ಠಿ ಇದು.

ಕೋವಿಡ್ ಬಿಕ್ಕಟ್ಟಿನ ವೇಳೆ ಈ ಮೊದಲು ನಡೆಸಿದ ಹಿಂದಿನ ಎರಡು ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಮುಖ್ಯಸ್ಥರು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ವಿವಿಧ ಕ್ರಮಗಳನ್ನು ಪ್ರಕಟಿಸಿದ್ದರು. 75 ಬೇಸಿಸ್ ಪಾಯಿಂಟ್​ಗಳ ಇಳಿಕೆ, ಸಾಲದ ಕಂತು ಕಟ್ಟಲು 3 ತಿಂಗಳು ಮುಂದೂಡಿಕೆ ಇತ್ಯಾದಿ ಕ್ರಮಗಳು ಬಂದಿದ್ದವು.

ಕೈಗಾರಿಕಾ ಉತ್ಪಾದನೆಯ ಶೇಕಡ 15 ರಷ್ಟು ಕಡಿಮೆಯಾಗಿದೆ. ಗೃಹ, ವಾಹನ, ವೈಯಕ್ತಿಕ ಸಾಲದ ಬಡ್ಡಿ ದರಗಳನ್ನು ಕಡಿತ ಮಾಡಲಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ. ರಿವರ್ಸ್ ರೆಪೋ ದರ ಕಡಿತದಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ. ಬೇಳೆಕಾಳುಗಳ ಬೆಲೆ ಏರಿಕೆ ಆತಂಕ ಹುಟ್ಟಿಸಿದೆ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ತಿಳಿಸಿದ್ದಾರೆ. ಕಳೆದ 30 ವರ್ಷಗಳಲ್ಲಿ ರಫ್ತು ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಆಮದು ಪ್ರಮಾಣ ಶೇಕಡ 5.8 ರಷ್ಟು ಇಳಿಕೆಯಾಗಿದೆ. ಈಗ ಕೃಷಿ ಕ್ಷೇತ್ರದ ಬಗ್ಗೆ ಉತ್ತಮವಾದ ನಿರೀಕ್ಷೆಯಿದೆ. ವಿದೇಶಿ ವಿನಿಮಯ ಮೌಲ್ಯ 9.2 ಮಿಲಿಯನ್ಗೆ ಏರಿಕೆಯಾಗಿದೆ. 2021 ರ ಅವಧಿಯಲ್ಲೇ ಈ ಏರಿಕೆಯಾಗಿದ್ದು, ಇದು ಭಾರತಕ್ಕೆ ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close