ಅಪರಾಧಕರ್ನಾಟಕ ಸುದ್ದಿ

ಬಾಗಲಕೋಟೆಯ ವ್ಯಕ್ತಿ ಕ್ವಾರಂಟೈನ್​ಗೆ ಹೆದರಿ ಆತ್ಮಹತ್ಯೆ;ಮಹಾರಾಷ್ಟ್ರದಿಂದ ಬಂದಿದ್ದ

Posted By : Sirajuddin Bangar

Source : NS18

ಕ್ವಾರಂಟೈನ್ ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ  ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ರಾಜ್ಯದಲ್ಲಿ ಮಹಾರಾಷ್ಟ್ರದಿಂದ ಬಂದಿರುವವರಲ್ಲಿ ಸೋಂಕು ಕಂಡುಬರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ  ಮಹಾರಾಷ್ಟ್ರ ರಾಜ್ಯಕ್ಕೆ ದುಡಿಯಲು  ಹೋಗಿದ್ದ ವ್ಯಕ್ತಿಯೋರ್ವ  ಕ್ವಾರಂಟೈನ್ ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ  ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯದಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಹೆಚ್ಚು ಕಂಡು ಬರುತ್ತಿರೋ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದ 35 ವರ್ಷದ ತುಕಾರಾಮ ಪವಾರ್ ಎಂಬಾತ ಕ್ವಾರಂಟೈನ್ ಗೆ ಹೆದರಿ ಮೇ 16ರಂದು  ವಿಷ ಸೇವಿಸಿದ್ದ. ಆತ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ.

ತುಕಾರಮ  ಮಹಾರಾಷ್ಟ್ರದ ರತ್ನಗಿರಿಗೆ ದುಡಿಯಲು ಹೋಗಿ, ಮೇ 15ರಂದು ರಾತ್ರಿ ಲಾರಿ ಮೂಲಕ ವಾಪಸ್ ಚಿಕ್ಕೂರ ಗ್ರಾಮಕ್ಕೆ ಬಂದಿದ್ದ. ಈ ವಿಷಯ ಆರೋಗ್ಯ ಇಲಾಖೆಗೆ ಗೊತ್ತಾಗುತ್ತಿದ್ದಂತೆ ಮೇ 16ರಂದು ಆಶಾ ಕಾರ್ಯಕರ್ತೆ ಹಾಗೂ ಸಿಬ್ಬಂದಿ ತುಕಾರಾಮ ಪವಾರ್ ತೋಟದ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ತಪಾಸಣೆ ಜೊತೆಗೆ ಕ್ವಾರಂಟೈನ್ ನಲ್ಲಿರುವಂತೆ ಹೇಳಿದ್ದಾರೆ. ಆಗ ತುಕಾರಾಮ ಕ್ವಾರಂಟೈನ್ ನಲ್ಲಿಡುತ್ತಾರೆ ಎಂದು ಹೆದರಿ ತೋಟದಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.

ಆಗ ತಕ್ಷಣವೇ ಆಂಬುಲೆನ್ಸ್ ಮೂಲಕ ತುಕಾರಾಮನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆತ  ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ. ಇನ್ನು, ಮಹಾರಾಷ್ಟ್ರದಿಂದ ಬಂದ ವೇಳೆ ವಿಷ ಸೇವಿಸಿದ್ದರಿಂದ ತುಕಾರಾಮನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿರಲಿಲ್ಲ‌.

ತುಕಾರಾಮ ಮೂಲತಃ ಯಾದಗಿರಿ ಜಿಲ್ಲೆಯವನಾಗಿದ್ದು, ಹೆಂಡತಿ ಮಕ್ಕಳೊಂದಿಗೆ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮಕ್ಕೆ ವಲಸೆ ಬಂದಿದ್ದ. ಚಿಕ್ಕೂರ ಗ್ರಾಮದಲ್ಲಿ ತೋಟವೊಂದನ್ನು ಪಾಲಿನಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದ. ಆದ್ರೆ ತುಕಾರಾಮ ಕಳೆದ ಫೆಬ್ರವರಿ ತಿಂಗಳಲ್ಲಿ  ಹೆಂಡತಿ ಮಕ್ಕಳನ್ನು ಚಿಕ್ಕೂರ ಗ್ರಾಮದಲ್ಲಿ ಬಿಟ್ಟು ಮಹಾರಾಷ್ಟ್ರದ ರತ್ನಗಿರಿಗೆ ದುಡಿಯಲು ಹೋಗಿದ್ದನು. ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ ಚಿಕ್ಕೂರ ಗ್ರಾಮಕ್ಕೆ ಬಂದಿದ್ದಾಗ ಕ್ವಾರಂಟೈನ್ ಗೆ ಹೆದರಿ ವಿಷ ಸೇವಿಸಿದ ಘಟನೆ ನಡೆದಿತ್ತು. ಮೃತ ತುಕಾರಾಮ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close