ಕರ್ನಾಟಕ ಸುದ್ದಿ

ಹಳ್ಳಿಗೆ ಹಿಂದಿರುಗಿದ ಎಲ್ಲರಿಗೂ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೆಲಸ ನೀಡಿ; ಯಡಿಯೂರಪ್ಪ ಸೂಚನೆ

ವರದಿ: ಸಿರಾಜುದ್ದೀನ್ ಬಂಗಾರ್

2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹಾಗೂ 6315.79 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಇದಲ್ಲದೆ ಕೇಂದ್ರ ಸರ್ಕಾರವೂ ಸಹ ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನಿಗದಿ ಪಡಿಸಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಮೇ 20); ಲಾಕ್‌ಡೌನ್‌ನಿಂದಾಗಿ ನಗರದಲ್ಲಿದ್ದ ವಲಸೆ ಕಾರ್ಮಿಕರು ಹಳ್ಳಿ ಸೇರುವಂತಾಗಿದೆ. ಹೀಗೆ ತಮ್ಮ ತಮ್ಮ ಹಳ್ಳಿಗಳಿಗೆ ಹಿಂದಿರುಗುವ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಉದ್ಯೋಗ ಒದಗಿಸುವಂತೆ ಇಂದಿನ ಸಭೆಯಲ್ಲಿ ಸಿಎಂ ಯಡಿಯೂರ್‍ಪ ಸೂಚನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಈ ಕುರಿತು ಸೂಚನೆ ನೀಡಿರುವ ಯಡಿಯೂರಪ್ಪ, “2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹಾಗೂ 6315.79 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ.

ಇದಲ್ಲದೆ ಕೇಂದ್ರ ಸರ್ಕಾರವೂ ಸಹ ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನಿಗದಿ ಪಡಿಸಿದೆ. ಹೀಗಾಗಿ ಲಾಕ್‌ಡೌನ್‌ ಕಾರಣದಿಂದ ನಗರವನ್ನು ತ್ಯಜಿಸಿ ಹಳ್ಳಿಗಳಿಗೆ ಹಿಂದುರುಗುವ ವಲಸಿಗ ಕಾರ್ಮಿಕರಿಗೆ ಉದ್ಯೋಗ ದೊರೆಯುವಂತೆ ಹಾಗೂ ನಿಗದಿತ ಅವಧಿಯಲ್ಲಿ ವೇತನ ಪಾವತಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ತಾಕೀತು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕೋವಿಡ್ 19 ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಮೆಚ್ಚುಗೆ ಸೂಚಿಸಿರುವ ಸಿಎಂ, “ಲಾಕ್ ಡೌನ್ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳು ಅಗತ್ಯ ವಸ್ತುಗಳ ಮನೆ ಬಾಗಿಲಿಗೆ ವಿತರಣೆ, ಸೌಲಭ್ಯಗಳ ವಿತರಣೆ, ಮನೆ ಮನೆ ಭೇಟಿ ನೀಡಿ ಹೋಮ್ ಕ್ವಾರಂಟೈನ್ ಪರಿಶೀಲನೆ, ದೈನಂದಿನ ಮಾಹಿತಿ ಸಂಗ್ರಹ, ಸಾಂಸ್ಥಿಕ ಕ್ವಾರಂಟೈನ್ ನಿರ್ವಹಣೆ ಮೇಲ್ವಿಚಾರಣೆ ವಹಿಸುತ್ತಿದೆ. ಇದಲ್ಲದೆ, ಸ್ವಸಹಾಯ ಸಂಘಗಳು 8 ಲಕ್ಷ ಮಾಸ್ಕ್ ತಯಾರಿಸಿ ವಿತರಿಸುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.

ಹಳ್ಳಿ ಭಾಗದಲ್ಲಿ ಕುಡಿಯುವ ನೀರು ಪೂರೈಸಿ:

ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸುವಂತೆಯೂ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ‌.

ಈ ವೇಳೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವ 14 ಜಿಲ್ಲೆಗಳಲ್ಲಿ 659 ಗ್ರಾಮಗಳಲ್ಲಿ 389 ಟ್ಯಾಂಕರ್ ಮತ್ತು 706 ಖಾಸಗಿ ಬೋರ್ ವೆಲ್ ಗಳಿಂದ ನೀರು ಪೂರೈಕೆ ಆಗುತ್ತಿದೆ ಎಂದು  ಅಧಿಕಾರಿಗಳು ಸಿಎಂ ಗೆ ಮಾಹಿತಿ ನೀಡಿದ್ದಾರೆ.ಇದಲ್ಲದೆ ಸಭೆಯಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ, ರಾಜ್ಯ ಸರ್ಕಾರದ ಜಲಧಾರೆ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಸಹ ಚರ್ಚೆ ನಡೆಸಲಾಗಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close