ಲೇಖನಸಿರವಾರ

ಯುವಜನತೆಯ ಹಿಂಗದ ಹಸಿವಿಗೆ TikTok ಎಂಬ Junk Food

ಲೇಖನ : ವಿಜಯ್.ಎ.ಸರೋದೆ ಸಿರವಾರ,ಪತ್ರಕರ್ತ ಹಾಗೂ ಪತ್ರಿಕೋದ್ಯಮ ಪ್ರಾಧ್ಯಾಪಕರು

ಯುವಜನತೆಯ ಹಿಂಗದ ಹಸಿವಿಗೆ TikTok ಎಂಬ Junk Food

ಇದೇ ಕೆಲವು ವರ್ಷಗಳ ಹಿಂದೆ ತರಗತಿಗಳಲ್ಲಿ ಒಂದಷ್ಟು ವಿಭಿನ್ನತೆಗಳು ಕಾಣಸಿಗುತ್ತಿದ್ದವು. ಒಂದಷ್ಟು ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ತೀವ್ರ ಆಸಕ್ತಿ ಇರುತ್ತಿತ್ತು. ಮತ್ತೆ ಕೆಲವರು ಓದು-ಆಟದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಹೀಗೆ ದೇಹ ಮತ್ತು ಮನಸ್ಸು ಎರಡನ್ನೂ ವ್ಯಾಯಾಮಗೊಳಿಸಲು ಬೇಕಾದ ವೇದಿಕೆಗಳನ್ನು ಶಾಲಾ-ಕಾಲೇಜುಗಳು ಒದಗಿಸುತ್ತಿದ್ದವಾದ್ದರಿಂದ, ಅವು ಒಂದು ಬಗೆಯಲ್ಲಿ ವಿಶ್ವವಿದ್ಯಾಲಯಗಳನ್ನೇ ಮೀರಿಸುವ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರಗಳಾಗಿ ಮಾರ್ಪಟ್ಟಿದ್ದವು.

ಆದರೆ ಇಂದಿನ ದಿನಗಳಲ್ಲಿ ಅನೇಕ ಭಿನ್ನವಾದ ಪರಿಸ್ಥಿತಿಗಳು ಶಾಲಾ-ಕಾಲೇಜುಗಳಲ್ಲಿ ಕಾಣಸಿಗುತ್ತದೆ. ಓದಲ್ಲಿ ಆಸಕ್ತಿ ಇದಿಯಾ? ಅಂತ ವಿದ್ಯಾರ್ಥಿಗಳಿಗೆ ಕೇಳಿದರೆ, ಹೋಗಿ ಸರ್ ಬೋರಿಂಗ್ ಅನ್ನೋ ಉತ್ತರ ಬರುತ್ತೆ. ಆಟ ಆಡ್ತೀರಾ? ಅಂತ ಕೇಳಿದರೆ, ಯಾವ್ದು ಪಬ್ಜಿ-ಲೂಡೋನಾ ಸರ್? ಅಂತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಇದಿಯಾ? ಅಂತ ಕೇಳಿದರೆ, ಹಂಗಂದ್ರೇನು ಸರ್? ಅಂತಾರೆ. ಶೈಕ್ಷಣಿಕ ಕೇಂದ್ರದ ಮೂರು ಮೂಲಾಧಾರಗಳಾದ ವಿದ್ಯಾಭ್ಯಾಸ-ಆಟಗಳು-ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೇನೇ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲ ಅಂತಾದಮೇಲೆ, ಶಾಲಾ-ಕಾಲೇಜಿಗೆ ಯಾಕೆ ಬರ್ತಾರೆ? ಅಂತ ಕೇಳಿದರೆ, ಉತ್ತರ ಮಾತ್ರ ಫ್ಯಾಷನ್ನು, ಫ್ರೆಂಡ್ಸು, ಫನ್ನು(FFF)!!!

ಅವರ ಈ ಮನಸ್ಥಿತಿಗೆ ತಕ್ಕಂತೆ ಅವರನ್ನು ಇನ್ನಷ್ಟು ಬಜಿಯಾಗಿರಿಸಲು ಈ TikTokನಂತಹ ಆ್ಯಪ್ಗಳು ಸ್ವರ್ಣ ವೇದಿಕೆಯನ್ನು ಒದಗಿಸಿವೆ‌ಯಾದ್ದರಿಂದ, ಓದು-ಆಟ-ಪಾಠಕ್ಕೆ ಅವರ ಮನಸ್ಸಿನಲ್ಲಿ ಅತ್ಯಂತ ಕಡಿಮೆ ಜಾಗ! ತಕ್ಷಣ ಆಹ್ಲಾದ ನೀಡುವ ಡ್ರಗ್ಸ್’ನಂತೆ ಈ ಬಗೆಯ ಕೆಲವು ಆ್ಯಪ್ಗಳು ವಿದ್ಯಾರ್ಥಿಗಳ ಮೇಲೆ ಕೆಲಸ ಮಾಡ್ತಿವೆಯಾದ್ದರಿಂದ, ಅವರು ನಿಧಾನವಾಗಿಯಾದರೂ ಅವುಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ.

TikTok ವಿದ್ಯಾರ್ಥಿಗಳ ಓದು ಕಸಿದುಕೊಳ್ಳುತ್ತಿದೆ, ದೇಹ ಹಾಗೂ ಬುದ್ದಿಗೆ ಕೆಲಸ ನೀಡದೇ ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದೆ. ಸಂತೃಪ್ತಿಯ ಹುಸಿ ಭಾವವನ್ನು ಮೂಡಿಸಿ, ಜೀವನದ ಅನೇಕ ಮಹತ್ವದ ಸಂಗತಿಗಳಿಂದ ಅವರನ್ನು ದೂರವಾಗಿಸುತ್ತಿದೆ. ವಿದ್ಯಾರ್ಥಿಗಳು ಫಾಲೋವರ್’ಗಳನ್ನು ಪಡೆಯಲು, ಲೈಕ್’ಗಳನ್ನು ಪಡೆಯಲು ತಮ್ಮ ಸಹಪಾಠಿಗಳೊಂದಿಗೆ ಪೈಪೋಟಿಗೆ ಬಿದ್ದು ಅನೇಕ ಬಗೆಯ ರಿಸ್ಕ್’ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಸ್ಪಂಧನೆ ಸಿಗದಿದ್ದಾಗ ಮಾನಸಿಕ ಖಿನ್ನತೆಗೆ ಒಳಗಾಗಿ, ತಮ್ಮ ಮನೋ-ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಏನೆಲ್ಲಾ ಮಾಡ್ತಾರೆ?
ಹುಡುಗರು ಸಾಮಾನ್ಯವಾಗಿ ತಮ್ಮ ದೈಹಿಕ ಸಾಮರ್ಥ್ಯ(ಎತ್ತರ, ದಪ್ಪ, ದೈಹಿಕ ಶಕ್ತಿ), ದೇಹನೋಟವನ್ನು ಬಂಡವಾಳವಾಗಿಸಿಕೊಂಡರೆ, ಹುಡುಗಿಯರು ತಮ್ಮ ಸೌಂದರ್ಯ, ಅಲಂಕಾರ-ಉಡುಪನ್ನು ಬಂಡವಾಳವಾಗಿಸಿಕೊಂಡು TikTok ವಿಡಿಯೋಗಳನ್ನು ತಯಾರಿಸುತ್ತಿದ್ದಾರೆ‌. TikTok ನಮ್ಮ ಪೂರ್ಣ ಕಲೆ ಪ್ರದರ್ಶನಕ್ಕೆ ವೇದಿಕೆಯಾಗದ ಕಾರಣ, ಅಪೂರ್ಣವಾಗಿರುವುದಕ್ಕೇ ಒಂದಷ್ಟು ಎಫೆಕ್ಟ್’ಗಳನ್ನು ಕೊಟ್ಟು, ಹುಸಿ ಸಂತೃಪ್ತಿಪಡಲು ಅವಕಾಶ ಮಾಡಿಕೊಟ್ಟಿದೆ. ಇಷ್ಟೇ ಆಗಿದ್ದರೆ ತೊಂದರೆ ಇರುತ್ತಿರಲಿಲ್ಲವೇನೋ‌. ಯುವ ಮನಸ್ಸುಗಳಲ್ಲಿ ಸಹಜವಾಗಿ ಪೈಪೋಟಿಯ ಗುಣ ಇರುವುದರಿಂದ, ಈ ಹುಚ್ಚು ಹಂಬಲ ಅವರನ್ನು ಮಾಡಬಾರದ್ದನ್ನೂ ಮಾಡಲು ಪ್ರೇರೇಪಿಸುತ್ತಿದೆ. ಹುಡುಗರು ಮತ್ತೊಬ್ಬರೊಂದಿಗೆ ಪೈಪೋಟಿಗೆ ಇಳಿದು, ತಮ್ಮ ಕಲೆ/ಹೀರೋಯಿಸಂ ಪ್ರದರ್ಶನಕ್ಕಾಗಿ ಸಾಮರ್ಥ್ಯ ಮೀರಿ ದುಂದುವೆಚ್ಚ ಮಾಡುತ್ತಿದ್ದಾರೆ, ದೇಹಕ್ಕೆ ಹಾನಿಯಾಗಬಹುದಾದ ರಿಸ್ಕ್’ಗಳನ್ನು ತೆಗೆದುಕೊಳ್ಳುತ್ತಿದ್ದಾರೆ‌. ಹಾಗೇ ಹುಡುಗಿಯರು ತಮ್ಮ ಸೌಂದರ್ಯ-ರೂಪ ಪ್ರದರ್ಶನಕ್ಕೆ ಹೆಚ್ಚು ಲೈಕ್/ವಿವ್ಸ್ ಸಿಗದಿದ್ದಾಗ, ಮೆಲ್ಲನೇ ಸಿನಿಮಾ ನಟಿಯರಂತೆ ಅಂಗ ಪ್ರದರ್ಶನಕ್ಕೆ ಜಾರುತ್ತಿದ್ದಾರೆ. ಹೀಗೆ ಹುಡುಗ-ಹುಡುಗಿಯರಿಬ್ಬರೂ ಯೌವನದ ಮದದಲ್ಲಿ ನೈತಿಕತೆಯ ಎಲ್ಲೆಗಳನ್ನು ಮೀರುತ್ತಿದ್ದಾರೆ. ಆ ಮೂಲಕ ತಾವು ಸಮಾಜಕ್ಕೆ ಕಂಟಕವಾಗುವ ಜೊತೆಗೆ ಅಂತಹ ಇನ್ನೂ ಕೆಲವರು ಹುಟ್ಟಲು ಪ್ರೇರಣೆಯಾಗುತ್ತಿದ್ದಾರೆ(ಇದೇ ಕೆಲವು ದಿನಗಳ ಹಿಂದೆ ಲೇಖನದ ಮೊದಲ ಭಾಗ ಬರೆದಿದ್ದಾಗ ಫೇಸ್ಬುಕ್ ಗೆಳೆಯರೊಬ್ಬರು, ನನ್ನ ಮುಂದಿನ ಲೇಖನಕ್ಕೆ ಪ್ರರಣೆ/ವಸ್ತುವಾಗಲೆಂದು ಕೆಲವು ವಿಡಿಯೋ ತುಣುಕುಗಳ ಸ್ಯಾಂಪಲ್ಲನ್ನು ಕಮೆಂಟ್ ಬಾಕ್ಸ್’ನಲ್ಲಿ ಹಾಕಿದ್ದರು. ಅವು ಅಶ್ಲೀಲ ದೇಹಭಾಷೆ, ಸಂಭಾಷಣೆ, ವರ್ತನೆಯನ್ನು ತೋರಿಸುವ ಕೆಲ ವಿಡಿಯೋ ತುಣುಕಾಗಿದ್ದವು. ಅದರಲ್ಲಿ ಒಂದು ಮಾತ್ರ ಅತಿರೇಕದ್ದು ಎಂದೆನಿಸಿತು. ಯುವತಿಯೊಬ್ಬಳು ಅರೆಬರೆ ದೇಹ ಕಾಣುವ ಹಾಗೆ ತನ್ನ ಸ್ನಾನದ ಕೋಣೆಯ ವಿಡಿಯೋ ಮಾಡಿ TikTokನಲ್ಲಿ ಹಂಚಿಕೊಂಡಿದ್ದಳು. ಹೆಚ್ಚಿನ ಫಾಲೋವರ್ಗಳನ್ನು ಪಡೆಯಲು ಹೀಗೆಲ್ಲಾ ಮಾಡ್ತಾರೆ ಅಂತ ನಂತರ ಹೊಳೆಯಿತು).

ನಿಜವಾದ ಕಲೆ-ಕಲೆಗಾರ ಅಂದ್ರೇನು?
ನಿಜವಾದ ಕಲೆ ಇರುವವರು ನಾಲ್ಕು ಜನರ ಮುಂದೆ ಪ್ರದರ್ಶನ ಮಾಡ್ತಾರೆ, ವೇದಿಕೆಗಳ ಮೇಲೆ ಪ್ರದರ್ಶಿಸಿ ಚಪ್ಪಾಳೆ ಜೊತೆಗೆ ಸಮ್ಮಾನಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಾರೆ‌‌. ಆದರೆ ಈ TikTok ಎಂಬ ಭೂತ ಕಲೆಗಾರನನ್ನೂ ಬೆಳೆಸದೇ, ಇತ್ತ ಕಲೆಯನ್ನೂ ಬೆಳೆಯಗೊಡದೇ, ಅತೃಪ್ತಿ ಹಾಗೂ ಅಸಮಾನದಲ್ಲಿಯೇ ಮಕ್ಕಳ ಬದುಕನ್ನು ಅವಸಾನಗೊಳಿಸುವ ಕಾರ್ಯ ಮಾಡುತ್ತಿದೆ. ಈಗಿನ ಮಕ್ಕಳು ಹೀಗೆ ಬಾಯಾರಿಕೆ ನೀಗಿಸಲು TikTokನಂತಹ ಬಿಸಿಲ್ಗುದುರೆಗಳ ಹಿಂದೆ ಓಡದೇ, ತಮ್ಮ ನೈಜ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಗಳನ್ನು ಹುಡುಕುವ ಜೊತೆಗೆ ಅದರ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶಕರನ್ನು ಹುಡುಕಿಕೊಳ್ಳಬೇಕಿದೆ. ಆಗ ಮಾತ್ರ ನೀವು ನಿಜವಾದ ಕಲೆಗಾರರಾಗಿ, ದೇಶದ ಹೆಮ್ಮೆಯ ಪ್ರಜೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯ.

ಕರೋನಾದಷ್ಟೇ ಅಪಾಯಕಾರಿ ಈ TikTok
ಚಿನಾದವರು ಕರೋನಾ ಪರಿಚಯಿಸುವುದಕ್ಕೆ ಮುಂಚೆಯೇ ಈ TikTok ಎಂಬ ಸಾಂಕ್ರಾಮಿಕ ವೈರಸ್ಸನ್ನು ವಿಶ್ವಕ್ಕೆ ಪರಿಚಯಿಸಿದೆ. ಅದರ ಬಲಿಪಶುಗಳು ಮಾತ್ರ ‘ಯುವಜನತೆ’. ಕರೋನಾ ಮನುಷ್ಯನ ಶ್ವಾಸಕೋಶದ ಮೇಲೆ ದಾಳಿ ಮಾಡಿದರೆ, ಈ TikTok ಮನುಷ್ಯನ ಮನಸ್ಸಿನ ಮೇಲೆ ದಾಳಿ ಮಾಡುತ್ತದೆ. ಕರೋಯ ಉಸಿರಾಟಕ್ಕೆ ತೊಂದರೆ ಮಾಡಿವಂತೆ TikTok ನಮ್ಮ ಆಲೋಚನೆ-ನಡೆ-ನುಡಿ-ವರ್ತನೆಯ ಮೇಲೆ ಪರಿಣಾಮ ಬೀರುತ್ತೆ. ಚೀನಾ ಕರೋನಾ ರೋಗ ಮುಚ್ಚಿಡಲು ಪ್ರಯತ್ನಿಸಿದರೂ ಅದು ಅಪಾಯಕಾರಿ ಅಂತ ನಂತರ ಗೊತ್ತಾಯಿತು, ಆದರೆ TikTok ಅಪಾಯಕಾರಿ ಅಂತ ಎಷ್ಟೋ ಜನರಿಗೆ ಈಗಲೂ ಗೊತ್ತಾಗುತ್ತಿಲ್ಲ. ಕರೋನಾ ಬಂದರೆ ಸರ್ಕಾರ ರೋಗಿಯನ್ನು ಕ್ವಾರೆಂಟೈನ್ ಮಾಡುತ್ತೆ, ಈ TikTok ರೋಗ ಹಿಡಿದರೆ ರೋಗಿ ತನ್ನಷ್ಟಕ್ಕೆ ತಾನೇ ಕ್ವಾರೆಂಟೈನ್ ಆಗುತ್ತಾನೆ, ಆತನ ಮೆದುಳನ್ನು ಅದು ಆಗಲೇ ಲಾಕ್ಡೌನ್ ಮಾಡಿರುತ್ತದೆ!

  • ವಿಜಯ್‌.ಎ‌.ಸರೋದೆ, ಪತ್ರಕರ್ತ ಹಾಗೂ ಪತ್ರಿಕೋದ್ಯಮ ಪ್ರಾಧ್ಯಾಪಕ

Continue

Related Articles

Leave a Reply

Your email address will not be published. Required fields are marked *

Back to top button
Close
Close