ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ಬೇಬಿ ಪೌಡರ್​ನಿಂದ ಕ್ಯಾನ್ಸರ್​ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್​ಸನ್​ ಆಯಂಡ್​ ಜಾನ್​ಸನ್​

Posted By : Sirajuddin Bangar

ನ್ಯೂಯಾರ್ಕ್​: ಬೇಬಿ ಪೌಡರ್​ನಲ್ಲಿ ಕ್ಯಾನ್ಸರ್​ಗೆ ಕಾರಣವಾಗುವ ಅಸ್ಬೆಸ್ಟಾಸ್​ (ಕಲ್ನಾರು) ಅಂಶಗಳಿವೆ ಎಂಬ ಕಾರಣಕ್ಕಾಗಿ ಕಾನೂನು ವಿಚಾರಣೆ ಎದುರಿಸುತ್ತಿರುವ ಹಾಗೂ 43,305 ಕೋಟಿ ರೂ. ದಂಡಕ್ಕೂ ಗುರಿಯಾಗಿರುವ ಜಾನ್​ಸನ್​ ಆಯಂಡ್​ ಜಾನ್​ಸನ್​ ಕಂಪನಿ ಅಮೆರಿಕ ಹಾಗೂ ಕೆನಡಾದಲ್ಲಿ ಮಾರಾಟ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

ಕಂಪನಿ ವಿರುದ್ಧ 19 ಸಾವಿರ ಪ್ರಕರಣಗಳು ದಾಖಲಾಗಿದ್ದು, ವಿವಿಧ ಕೋರ್ಟ್​ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಕಂಪನಿ ಉತ್ಪನ್ನದ ಸುರಕ್ಷತೆ ಬಗ್ಗೆ ಸುಳ್ಳು ಮಾಹಿತಿ ಹಬ್ಬಿದೆ. ಈ ಕಾರಣದಿಂದಾಗಿ ಬೇಬಿ ಪೌಡರ್​ಗೆ ಬೇಡಿಕೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿರುವ ಬೇಬಿ ಪೌಡರ್​ಅನ್ನು ಹಿಂಪಡೆಯಲಾಗುತ್ತಿದೆ. ಆದರೆ, ದಶಕಗಳ ವೈಜ್ಪಾನಿಕ ಸಂಶೋಧನೆಗಳ ಅಧ್ಯಯನದಿಂದಾಗಿ ಬೇಬಿ ಪೌಡರ್​ನ ಸುರಕ್ಷತೆ ವಿಚಾರದಲ್ಲಿ ಈಗಲೂ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ಕಂಪನಿ ತಿಳಿಸಿದೆ.

ಬೇಬಿ ಪೌಡರ್​ನಲ್ಲಿ ಕಲ್ನಾರಿನ ಅಂಶವಿದ್ದು, ಕಾನ್ಸರ್​ಗೆ ಕಾರಣವಾಗುತ್ತಿದೆ ಎಂದು ಗ್ರಾಹಕರು ಹಾಗೂ ಕ್ಯಾನ್ಸರ್​ಗೆ ಬಲಿಯಾದವರ ಕುಟುಂಬದವರು 19,000ಕ್ಕೂ ಅಧಿಕ ದಾವೆಗಳನ್ನು ಕಂಪನಿ ವಿರುದ್ಧ ಹೂಡಿದ್ದಾರೆ. ನ್ಯೂಜೆರ್ಸಿ ಜಿಲ್ಲಾ ಕೋರ್ಟ್​ವೊಂದರಲ್ಲಿ ಸಾವಿರಾರು ಪ್ರಕರಣಗಳ ವಿಚಾರಣೆ ಬಾಕಿಯಿದೆ.

ಕಲ್ನಾರು ಕ್ಯಾನ್ಸರ್​ಗೆ ಕಾರಣ ಎಂದು ಹಲವು ದೇಶಗಳಲ್ಲಿ ಇದರ ಬಳಕೆ ನಿಷೇಧಿಸಲಾಗಿದೆ. ಆದರೆ, ಜಾನ್​ಸನ್​ ಆಯಂಡ್​ ಜಾನ್​ಸನ್​ ಕಂಪನಿ ತಯಾರಿಸುವ ಬೇಬಿ ಪೌಡರ್​ನಲ್ಲಿ ಕಲ್ನಾರಿನ ಅಂಶವಿದೆ. ಇದರಿಂದ ತನಗೆ ಕ್ಯಾನ್ಸರ್​ ತಗುಲಿದೆ ಎಂದು 1999ರಲ್ಲಿ ಡಾರ್ಲೆನ್​ ಕಾಕರ್​ ಎಂಬ ಮಹಿಳೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಕಂಪನಿ ಆಂತರಿಕ ವರದಿಯನ್ನು ಬಹಿರಂಗಪಡಿಸಬೇಕೆಂಬ ವಾದದಲ್ಲಿ ಅವಳಿಗೆ ಸೋಲಾಗಿತ್ತು. ಕಾಕರ್​ 2009ರಲ್ಲಿ ಕಲ್ನಾರಿನಿಂದ ಉಂಟಾಗುವ ಮೆಸೊಥೆಲಿಯೋಮಾ ಎಂಬ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಳು. ಬಳಿಕ ಕಂಪನಿ ವಿರುದ್ಧ ಹೋರಾಟ ಬಳಿಕವೂ ಮುಂದುವರಿದಿತ್ತು.

ಬೇಬಿ ಪೌಡರ್​ನಲ್ಲಿ ಕಲ್ನಾರಿನ ಅಂಶವಿದೆ ಎಂಬುದು ದಶಕಗಳಿಂದಲೂ ಕಂಪನಿಗೆ ತಿಳಿದಿದೆ ಎಂದು 2018ರಲ್ಲಿ ರಾಯ್ಟರ್ಸ್​ ಸುದ್ದಿ ಸಂಸ್ಥೆ ತನಿಖಾ ವರದಿ ಪ್ರಕಟಿಸಿದ ಬಳಿಕ ಸಂಸ್ಥೆಗೆ ಭಾರಿ ಹಿನ್ನಡೆಯುಂಟಾಗಿತ್ತು. ಒಂದೇ ದಿನದಲ್ಲಿ ಕಂಪನಿ ಷೇರು ಮೌಲ್ಯ ಪಾತಾಳಕ್ಕೆ ಕುಸಿದು 3 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿತ್ತು.

ಬೇಬಿ ಪೌಡರ್​ ಜಾನ್​​ಸನ್​ ಆಯಂಡ್​ ಜಾನ್​ಸನ್​ನ ಪ್ರಮುಖ ಉತ್ಪನ್ನವಾಗಿದೆ. ಇದರ ಕಚ್ಚಾ ವಸ್ತು ಹಾಗೂ ಅಂತಿಮ ಉತ್ಪನ್ನದಲ್ಲಿ ಸಣ್ಣ ಪ್ರಮಾಣದಲ್ಲಿ ಕ್ಯಾನ್ಸರ್​ಕಾರಕ ಕಲ್ನಾರಿನ ಅಂಶವಿರುವುದು 1971ರಿಂದ 2000ರ ವರೆಗಿನ ಕಂಪನಿಯ ಆಂತರಿಕ ವರದಿಗಳಲ್ಲಿ ದಾಖಲಾಗಿತ್ತು ಎಂದು ರಾಯ್ಟರ್ಸ್​ ಬಯಲಿಗೆಳೆದಿತ್ತು.

ಅಮೆರಿಕ ಸಂಸತ್​ ಸಮಿತಿ ಕೂಡ 14 ತಿಂಗಳ ಕಾಲ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಕಂಪನಿ ಬೇಬಿ ಪೌಡರ್​ನ ಮಾರಾಟ ಸ್ಥಗಿತ ಮಾಡಿರುವುದು ಸಮಿತಿ ನಡೆಸಿದ ತನಿಖೆಗೆ ಸಂದ ಜಯವಾಗಿದೆ ಎಂದು ಸಮಿತಿಯ ನೇತೃತ್ವ ವಹಿಸಿದ್ದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ. ಇದಲ್ಲದೇ, ದಾವೆ ಹೂಡಿರುವ ಹಲವು ಗ್ರಾಹಕರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

1894ರಿಂದಲೂ ಕಂಪನಿ ಬೇಬಿ ಪೌಡರ್​ ತಯಾರಿಸುತ್ತಿದೆ. ಸದ್ಯ ಅಮೆರಿಕದಲ್ಲಿ ಇದರ ಮಾರುಕಟ್ಟೆ ಪಾಲು ಶೇ.0.5ಗೆ ಇಳಿದಿದೆ. ಆದರೆ, ಕಾನೂನು ಹೋರಾಟವನ್ನು ಮುಂದುವರಿಸುವುದಾಛಗಿ ಕಂಪನಿ ಹೇಳಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close