ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ದುಡ್ಡು ಕೊಟ್ಟರೆ ಕ್ವಾರಂಟೈನ್ ಇಲ್ಲ? ಬೆಂಗಳೂರಲ್ಲಿ ಕೊರೋನಾ ಸಂಕಷ್ಟದಲ್ಲಿ ಭ್ರಷ್ಟಾಚಾರದ ಕರ್ಮಕಾಂಡ?

ವರದಿ: ಸಿರಾಜುದ್ದೀನ್ ಬಂಗಾರ್

ಬೆಂಗಳೂರು(ಮೇ 20): ಇತ್ತೀಚೆಗೆ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದವರನ್ನು ಮನೆಗೆ ಕಳುಹಿಸದೆ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. 14 ದಿನ ಅವರು ಕಡ್ಡಾಯವಾಗಿ ಕ್ವಾರಂಟೈನ್​ಗೆ ಒಳಪಟ್ಟು, ಸೋಂಕು ಇಲ್ಲವೆಂದು ದೃಢಪಟ್ಟಲ್ಲಿ ಮಾತ್ರವೇ ಮನೆಗೆ ಹೋಗಲು ಅವಕಾಶ ಇರುತ್ತದೆ. ಆದರೆ, ಬೆಂಗಳೂರಿನ ಹೋಟೆಲ್​ಗಳಲ್ಲಿ ಕ್ವಾರಂಟೈನ್​ನಲ್ಲಿರುವ ಕೆಲ ವ್ಯಕ್ತಿಗಳು ಭ್ರಷ್ಟಾಚಾರದ ಆರೋಪಗಳನ್ನ ಮಾಡಿದ್ದಾರೆ. ಕ್ವಾರಂಟೈನ್​ನಲ್ಲಿರುವುದು ಬೇಡವೆಂದರೆ ಹಣ ತೆತ್ತು ಮನೆಗೆ ಹೋಗಬಹುದು ಎಂದು ಅಧಿಕಾರಿಗಳೇ ಆಮಿಷ ಒಡ್ಡುತ್ತಿದ್ಧಾರೆಂದು ಜನರು ಆಪಾದಿಸುತ್ತಿದ್ದಾರೆ.

ದಿವ್ಯಾ ರೆಸಿಡೆನ್ಸಿ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿರುವ ಅನೇಕ ಜನರು ಭ್ರಷ್ಟಾಚಾರದ ಆರೋಪ ಮಾಡಿದ್ಧಾರೆ. ಇಲ್ಲಿರುವ ಜನರು ಕ್ವಾರಂಟೈನ್​ಗೆ ಒಳಪಟ್ಟು ಮೂರ್ನಾಲ್ಕು ದಿನಗಳಾದರೂ ಕೊರೋನಾ ಪರೀಕ್ಷೆ ಮಾಡುವುದಿರಲಿ, ಯಾವುದೇ ಬಿಬಿಎಂಪಿ ಅಧಿಕಾರಿಯಾಗಲೀ, ವೈದ್ಯಕೀಯ ಸಿಬ್ಬಂದಿಯಾಗಲಿ ಇತ್ತ ತಿರುಗಿಯೂ ನೋಡಿಲ್ಲ ಎಂಬುದು ಇವರ ತಳಮಳ. ಏನೂ ಇಲ್ಲದೆ ಸುಮ್ಮನೆ ಇರಲು ಸಾಧ್ಯವಿಲ್ಲವೆಂದು ಒಬ್ಬ ಅಧಿಕಾರಿಯನ್ನು ಸಂಪರ್ಕಿಸಿ ಕೇಳಿದಾಗ ನಿರ್ದಿಷ್ಟ ದುಡ್ಡು ಕೊಟ್ಟು ಮನೆಗೆ ಹೋಗುವ ಅವಕಾಶ ನೀಡಿರುವುದು ತಿಳಿದುಬಂದಿದೆ.

ಕ್ವಾರಂಟೈನ್​ನಲ್ಲಿರುವ ಜನರು ಆ ಅಧಿಕಾರಿಯೊಂದಿಗೆ ಸಂಭಾಷಣೆ ನಡೆಸಿರುವ ಆಡಿಯೋ ನ್ಯೂಸ್18ಗೆ ಸಿಕ್ಕಿದೆ. ಅದರಂತೆ ಅಧಿಕಾರಿಯು ಕ್ವಾರಂಟೈನ್ ವ್ಯಕ್ತಿಯಿಂದ 27 ಸಾವಿರ ರೂಪಾಯಿ ಕೇಳುತ್ತಿರುವುದು ಈ ಆಡಿಯೋದಲ್ಲಿ ಕೇಳಿಸುತ್ತದೆ. ಇಷ್ಟು ದುಡ್ಡು ಕೊಟ್ಟರೆ ಯಾವುದೇ ತೊಂದರೆ ಇಲ್ಲದೆ ಮನೆಗೆ ಕಳುಹಿಸಿಕೊಡುತ್ತೇನೆ. 12ನೇ ದಿನದಂದು ಬಂದು ಪರೀಕ್ಷೆಗೆ ಒಳಪಡಬೇಕು ಎಂದು ಆ ಅಧಿಕಾರಿ ಹೇಳಿದ್ದಾರೆ.

ಈ ಆರೋಪದ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವಿಕುಮಾರ್ ಸುರಪುರ್ ಅವರನ್ನು ವಿಚಾರಿಸಿದಾಗ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಇದು ಬಹಳ ಗಂಭೀರ ಆರೋಪ. ಆ ಅಧಿಕಾರಿ ಯಾರೆಂದು ಗೊತ್ತಾದರೆ ಸೇವೆಯಿಂದ ಅಮಾನತು ಮಾಡಲಾಗುವುದು. ಜನರನ್ನು ಮನೆಗೆ ವಾಪಸ್ ಕಳುಹಿಸುವ ಅಧಿಕಾರ ಯಾರಿಗೂ ಇಲ್ಲ. ಕ್ವಾರಂಟೈನ್​ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ದಾಖಲೆಯನ್ನೂ ಇಟ್ಟುಕೊಳ್ಳಲಾಗುತ್ತದೆ. ಅಧಿಕೃತ ಅನುಮೋದನೆ ಇಲ್ಲದೆ ಯಾರನ್ನೂ ವಾಪಸ್ ಕಳುಹಿಸಲಾಗುವುದಿಲ್ಲ” ಎಂದರು ಸ್ಪಷ್ಟಪಡಿಸಿದ್ದಾರೆ.

ಅನ್ಯ ರಾಜ್ಯಗಳಿಂದ ಬಂದವರು ಕ್ವಾರಂಟೈನ್​ಗೆ ಒಳಪಡುವುದು ಕಡ್ಡಾಯ. ಅವರಿಗೆ ಸರ್ಕಾರ ನಿಗದಿಪಡಿಸಿದ ಆಸ್ಪತ್ರೆ ಮತ್ತಿತರ ವ್ಯವಸ್ಥೆಯನ್ನ ಉಪಯೋಗಿಸಿಕೊಳ್ಳಬಹುದು. ಅಥವಾ ತಮ್ಮಿಚ್ಛೆಯ ಕೆಲ ಹೋಟೆಲ್​ಗಳಲ್ಲಿ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್​ಗೆ ಒಳಪಡುವ ಅವಕಾಶ ಇತ್ತು. ಖಾಸಗಿ ಹೋಟೆಲ್​ಗಳಲ್ಲಿ ವ್ಯವಸ್ಥೆ ಸಮರ್ಪಕವಾಗಿರುತ್ತದೆ ಎಂದು ಬಂದ ಅನೇಕರಿಗೆ ಬಹಳ ನಿರಾಸೆಯಾಗಿದೆ. 750 ರೂಪಾಯಿಯ ದಿನದ ಬಾಡಿಗೆ ಇರುವ ಹೋಟೆಲ್ ಅನ್ನು ಆಯ್ದುಕೊಂಡ ಜನರಿಂದ 2,000 ರೂಪಾಯಿವರೆಗೂ ದರ ಹೇರಲಾಗಿದೆ ಎಂದು ಮತ್ತೊಬ್ಬ ವ್ಯಕ್ತಿ ಆಪಾದಿಸುತ್ತಾರೆ.

“ಇದೊಂದು ದಂಧೆಯಾಗಿದೆ. ನೀರು, ಚಹಾ ಇತ್ಯಾದಿ ಯಾವುದಕ್ಕಾದರೂ ದುಪ್ಟಟ್ಟು ದರ ಹಾಕುತ್ತಾರೆ. ಒಂದು ಬಾಟಲ್ ನೀರು 30 ರೂಪಾಯಿ. ಒಂದು ಕಪ್ ಟೀ 20 ರೂಪಾಯಿ ಇದೆ” ಎಂದು ಡಿಜಿಟಲ್ ಮಾರ್ಕೆಟಿಂಗ್ ಅನಾಲಿಸ್ಟ್ ಆಗಿ ಕೆಲಸ ಮಾಡುವ ಆನಂದ್ ಎಂಬುವವರು ಹೇಳುತ್ತಾರೆ.

ಒಳ್ಳೆಯ ಹೋಟೆಲ್ ಎಂದು ಹೋದವರಿಗೆ ಕೆಟ್ಟ ಊಟ, ಕೆಟ್ಟ ವ್ಯವಸ್ಥೆ ಎದುರಾಗಿದೆ. ಅನೇಕ ಹೋಟೆಲ್​ಗಳಲ್ಲಿ ಇದೇ ಹಣೆಬರಹ ಎಂದು ಅಲ್ಲಿನವರು ಅಲವತ್ತುಕೊಂಡಿದ್ದಾರೆ.

ತಮಗೆ 2-3 ದಿನದೊಳಗೆ ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಈಗ 6 ದಿನಗಳಾದರೂ ಪರೀಕ್ಷೆಯೇ ಮಾಡಿಲ್ಲ. ತಮ್ಮ ಹೋಟೆಲ್​ನಲ್ಲಿ ತಮ್ಮೊಂದಿಗೆ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯೊಬ್ಬರಿಗೆ ಜ್ವರ ಬಂದಿತ್ತು. ಈಗ ಎಲ್ಲರಿಗೂ ಭಯ ಶುರುವಾಗಿದೆ ಎಂದು ಸಿಕಂದರಾಬಾದ್​ನಿಂದ ಬಂದಿರುವ ಶಿವಾ ರೆಡ್ಡಿ ಹೇಳಿದ್ದಾರೆ.

ಆದರೆ, ಬಿಬಿಎಂಪಿ ವಿಶೇಷ ಆಯುಕ್ತ ಸುರಪುರ್ ಅವರು ಹೇಳುವ ಪ್ರಕಾರ, ಬೇರೆ ರಾಜ್ಯಗಳಿಂದ ಬಂದವ ವ್ಯಕ್ತಿಗಳನ್ನು 7-10 ದಿನಗಳಲ್ಲಿ ಪರೀಕ್ಷೆ ನಡೆಸುವುದು ಉತ್ತಮ. ಬೇಗನೇ ಪರೀಕ್ಷೆ ನಡೆಸಿದರೆ ನೆಗಟಿವ್ ರಿಸಲ್ಟ್ ಬರುವ ಸಾಧ್ಯತೆ ಇರುತ್ತದೆ. ನೆಗಟಿವ್ ಬರುತ್ತಿದ್ದಂತೆಯೇ ಜನರು ಹೊರಗೆ ಹೋಗಲು ತುದಿಗಾಲಲ್ಲಿ ಇರುತ್ತಾರೆ.

ಇನ್ನು, ಜನರಿಂದ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ನಿಗದಿಪಡಿಸಿದ ನಿಯಮಾವಳಿ ಪ್ರಕಾರವೇ ಹೋಟೆಲ್​ಗಳು ನಡೆದುಕೊಳ್ಳಬೇಕು. ನಿಗದಿಗಿಂತ ಹೆಚ್ಚು ವಸೂಲಿ ಮಾಡುತ್ತಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close