ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು ಕೊರೋನಾ : ಗ್ರೀನ್ ವಲಯದಲ್ಲಿದ್ದ ರಾಯಚೂರನ್ನು ಆರೆಂಜ್ ಝೋನ್ ಮಾಡಿದ ವಲಸಿಗರು

ಭತ್ತದ ನಾಡಿಗೂ ಆವರಿಸಿತು ಕೊರೋನ:ನಾಳೆ ರಾಯಚೂರು ನಗರ ಸಂಪೂರ್ಣ ಲಾಕಡೌನ್

ವರದಿ : ಸಿರಾಜುದ್ದಿನ್ ಬಂಗಾರ್

ಇಡೀ ಜಗತ್ತನ್ನು ಕೊರೋನಾ ವೈರಸ್ ತಲ್ಲಣಗೊಳಿಸಿದೆ. ನಿನ್ನೆಯವರೆಗೂ ಬಿಸಿಲ ನಾಡು ರಾಯಚೂರಿನಲ್ಲಿ ಕೊರೋನಾ ಸೋಂಕಿತರು ಇರಲಿಲ್ಲ. ಆದರೆ, ನಿನ್ನೆ‌ ಸಂಜೆಯಿಂದ ಇದುವರೆಗೆ 6 ಕೊರೋನಾ ಕೇಸ್ ಗಳು ವರದಿಯಾಗಿ ಗ್ರೀನ್ ವಲಯದಲ್ಲಿದ್ದ ಜಿಲ್ಲೆಯು ಈಗ ಆರೆಂಜ್ ಝೋನ್ ಆಗಿದೆ.

ಕೊರೋನಾ ವೈರಸ್ ಹರಡುತ್ತಿದ್ದಂತೆ ಆಂಧ್ರ, ತೆಲಂಗಾಣ ಹಾಗು ರಾಜ್ಯದ ರೆಡ್ ಝೋನ್ ಜಿಲ್ಲೆಗಳ ಗಡಿ ಹೊಂದಿದ್ದ ರಾಯಚೂರಿನಲ್ಲಿ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡು ತಪಾಸಣೆ ನಡೆಸಿದ್ದರು. ಗಡಿಗಳಿಂದ ರಾಜ್ಯಕ್ಕೆ ನುಸುಳುವವರನ್ನು ತಡೆದಿದ್ದರು. ಜಿಲ್ಲೆಯ ಗಡಿಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು. ಎಪಿಎಂಸಿಗೂ ಹೊರರಾಜ್ಯದ ಸಂಚಾರ ನಿಷೇಧಿಸಲಾಗಿತ್ತು. ಈ ಎಲ್ಲಾ ಬಿಗಿ ಕ್ರಮದಿಂದಾಗಿ ರಾಯಚೂರಿನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿರಲಿಲ್ಲ. ಜಿಲ್ಲೆಯಲ್ಲಿ ನಿನ್ನೆಯವರೆಗೂ 2492 ಜನರ ರಕ್ತ ಹಾಗು ಗಂಟಲ ದ್ರವ ಮಾದರಿಯ ವರದಿ ನೆಗಟಿವ್ ಬಂದಿತ್ತು.

ಆರಂಭದಲ್ಲಿ 174 ಜನರು ವಿದೇಶದಿಂದ ಬಂದಿದ್ದರು. ಅವರ ನೇರ ಸಂಪರ್ಕದಲ್ಲಿ 760 ಜನರ ಮೇಲೆ‌ ನಿಗಾ ವಹಿಸಲಾಗಿತ್ತು. ಮೊದಲು ಹಂತದ ಲಾಕ್ ಡೌನ್ ಆರಂಭವಾದ ತಕ್ಷಣ ರಾಜ್ಯದ ಒಳಗಡೆ ಇರುವ ಹಾಗೂ ಹೊರಗಡೆ ಇರುವ 47,432 ಕೂಲಿಕಾರ್ಮಿಕರು‌ ಸ್ವಗ್ರಾಮಕ್ಕೆ ಮರಳಿದ್ದರು. ಅವರಿಗೆ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆಗಲೂ ಸಹ ಜಿಲ್ಲೆಯಲ್ಲಿ ಕೊರೋನಾ ಕಾಣಿಸಿಕೊಂಡಿರಲಿಲ್ಲ. ಆದರೆ, 3ನೇ ಹಂತದ ಲಾಕ್ ಡೌನ್ ಆರಂಭವಾದ ತಕ್ಷಣ ಹೊರರಾಜ್ಯದಲ್ಲಿದ್ದವರು ಹಾಗೂ ರಾಜ್ಯದೊಳಗೆ ಇದ್ದವರನ್ನು ಸ್ವಗ್ರಾಮಕ್ಕೆ ಮರಳಲು ಸೂಚಿಸಲಾಗಿತ್ತು.

ಇದರಿಂದ ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್ ಗುಂಟೂರು ಹಾಗೂ ಪ್ರಕಾಶಂ ಜಿಲ್ಲೆಯಲ್ಲಿ ಲಾಕ್ ಆಗಿದ್ದ ಕೂಲಿಕಾರ್ಮಿಕರು ರಾಯಚೂರು ಜಿಲ್ಲೆಗೆ ಆಗಮಿಸಿದ್ದರು. ನಿನ್ನೆಯವರೆಗೂ ಜಿಲ್ಲೆಗೆ ಒಟ್ಟು 9434 ಜನರು ವಾಪಸ್ಸಾಗಿದ್ದಾರೆ. ಇನ್ನು 3,000ಕ್ಕೂ ಅಧಿಕ ವಲಸಿಗರು ವಾಪಸ್ಸಾಗಲಿದ್ದಾರೆ.  ವಲಸೆ ಬಂದ ಕಾರ್ಮಿಕರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ವಲಸೆ ಬಂದ ಕಾರ್ಮಿಕರಲ್ಲಿ ಬಹುತೇಕರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಆದರೂ ಪರೀಕ್ಷೆ ಮಾಡಿದಾಗ ಯರಮರಸ್ ಬಳಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿಯ 4 ಹಾಗು ದೇವದುರ್ಗಾ ತಾಲೂಕಿನ ಮಸರಕಲ್ ನಲ್ಲಿದ್ದ ಕ್ವಾರಂಟೈನ್ ನಲ್ಲಿ‌ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ವರದಿಯಾದ ನಂತರ ಜಿಲ್ಲೆಯ ಜನತೆಯಲ್ಲಿ ಭಯ ಆವರಿಸಿದೆ.

ವಲಸೆ ಕಾರ್ಮಿಕರು ಕ್ವಾರಂಟೈನ್ ನಲ್ಲಿರುವುದರಿಂದ ಅವರು ಕ್ವಾರಂಟೈನ್ ನಲ್ಲಿಯರೊಂದಿಗೆ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕ ಹೊಂದಿದವರ ಪಟ್ಟಿ ಮಾಡಿ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಮೊದಲು ಬಂದವರಂತೆ ನೇರವಾಗಿ ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಿದ್ದರೆ ಕೊರೋನಾ ಇನ್ನಷ್ಟು ಹರಡುವ ಭೀತಿ ಇತ್ತು. ಆದರೆ, ಈಗ ಕ್ವಾರಂಟೈನ್ ನಲ್ಲಿದ್ದವರಿಗೆ ಪಾಸಿಟಿವ್ ಬಂದಿರುವದರಿಂದ ಹೊರಗಡೆ ಇದ್ದವರು ಒಂದಿಷ್ಟು ಸಮಾಧಾನಗೊಂಡಿದ್ದಾರೆ. ಆದರೂ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ತಿರುಗಾಡುವುದು, ಅವರನ್ನು ಅವರ ಸಂಬಂಧಿಗಳು ಕ್ವಾರಂಟೈನ್ ಕೇಂದ್ರದಲ್ಲಿಯೇ ಮಾತನಾಡಿಸುವುದು ಕಂಡುಬಂದಿದೆ.  ಇದು ರಾಯಚೂರು ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close