ಅಂತರಾಷ್ಟ್ರೀಯವಿಜ್ಞಾನ-ತಂತ್ರಜ್ಣಾನ

ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಚಂಡಮಾರುತ; ಇಂದು, ನಾಳೆ ರಾಜ್ಯದಲ್ಲಿ ಮಳೆ ಸಾಧ್ಯತೆ

Posted By : Sirajuddin Bangar

Source : ANI

ದೇಶದೆಲ್ಲೆಡೆ ಕೊರೋನಾ ವೈರಸ್​ನಿಂದಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತಕ್ಕೆ ಅಂಫಾನ್ (Amphan) ಎಂದು ಹೆಸರಿಡಲಾಗಿದೆ. ಈ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತದ ಪರಿಣಾಮದಿಂದ ಪೂರ್ವ ಕರಾವಳಿ, ಅಂಡಮಾನ್- ನಿಕೋಬಾರ್, ಒರಿಸ್ಸಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಉಂಟಾಗಲಿದ್ದು, ಇಂದು ಮತ್ತು ನಾಳೆ ಕರಾವಳಿಯ ಕೆಲವು ಪ್ರದೇಶ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಚಂಡಮಾರುತ ಪರಿಣಾಮ ಕರ್ನಾಟಕದ ಮೇಲೆ ಹೆಚ್ಚಾಗಿ ತಟ್ಟದಿದ್ದರೂ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಂಫಾನ್​ ಚಂಡಮಾರುತದಿಂದಾಗಿ ಈಗಾಗಲೇ ಒರಿಸ್ಸಾದ 12 ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಚಂಡಮಾರುತ ಉತ್ತರ ಒಳನಾಡಿಗೆ ಚಲನೆಯಾಗುವ ಸಾಧ್ಯತೆ ಹೆಚ್ಚಿದೆ. ಬಾಂಗ್ಲಾದೇಶದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ. ಗಾಳಿಯ ತೀವ್ರತೆ ಹೆಚ್ಚಾಗಲಿದ್ದು, ಗಂಟೆಗೆ 95 ರಿಂದ 105 ಕಿಲೋಮೀಟರ್ ವೇಗದಲ್ಲಿ ಗಾಳಿ ಚಲಿಸಲಿದೆ. ಚಂಡಮಾರುತದ ತೀವ್ರತೆ ನಾಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ನಾಳೆಯ ವೇಳೆಗೆ ಗಂಟೆಗೆ 110ರಿಂದ 150 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೇ 19ರ ವೇಳೆಗೆ ವಿಪರೀತ ಗಾಳಿ, ಮಳೆಯಾಗುವ ಲಕ್ಷಣಗಳು ಕಾಣುತ್ತಿವೆ.

ಆದರೆ, ಇದರ ಪರಿಣಾಮ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಅಲೆಗಳ ಉಬ್ಬರ ಹೆಚ್ಚಾಗಲಿದೆ. ಅಲ್ಲಿ ಯಾವುದೇ ಮೀನುಗಾರರು ಸಮುದ್ರಕ್ಕೆ ಇಳಿಯುವುದು ಅಪಾಯ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ನಮ್ಮ ರಾಜ್ಯದ ಕರಾವಳಿ ಭಾಗಕ್ಕೆ ಈ ಚಂಡಮಾರುತ ಅತಿ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆದರೆ, ನಮ್ಮ ರಾಜ್ಯದ ಕರಾವಳಿ‌, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ  ಮಳೆಯಾಗುವ ಸಾಧ್ಯತೆ ಇದೆ. ಕೊಡಗು , ಚಿಕ್ಕಮಗಳೂರು ಹಾಸನ ಶಿವಮೊಗ್ಗ, ಮೈಸೂರು ಭಾಗದಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close