ಕರ್ನಾಟಕ ಸುದ್ದಿ

10ನೇ ತರಗತಿ ಪರೀಕ್ಷೆ :ಸೋಮವಾರ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಸಚಿವ ಸುರೇಶ್‌ ಕುಮಾರ್‌

ವರದಿ : ಸಿರಾಜುದ್ದೀನ್ ಬಂಗಾರ್

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ವೇಳೆ ಮಕ್ಕಳ ಹಿತವನ್ನೂ ಸಹ ಕಾಪಾಡಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೆ ತಮ್ಮ ಮನೆ ಪಕ್ಕದಲ್ಲೇ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. 

(ಮೇ 16); ಲಾಕ್‌ಡೌನ್‌ನಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೂ ಮುಂದೂಡಲಾಗಿತ್ತು. ಆದರೆ, ಈ ಕುರಿತು ಶಿಕ್ಷಣ ಇಲಾಖೆಯಲ್ಲಿ ಸೋಮವಾರ ಚರ್ಚೆ ನಡೆಯಲಿದೆ. ಈ ಚರ್ಚೆಯ ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಇಂಗ್ಲೀಷ್‌ ಪತ್ರಿಕೆ ಪರೀಕ್ಷೆ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ ಬೆನ್ನಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಮಾಹಿತಿ ನೀಡಿರುವ ಸಚಿವ ಸುರೇಶ್‌ ಕುಮಾರ್‌, “10ನೇ ತರಗತಿ ಪರೀಕ್ಷೆಗಳನ್ನು ಶೀಘ್ರದಲ್ಲಿ ನಡೆಸುವ ಸಲುವಾಗಿ ಶಿಕ್ಷಣ ಇಲಾಖೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಸೋಮವಾರ ಈ ಕುರಿತು ಮಹತ್ವದ ಚರ್ಚೆ ನಡೆಯಲಿದ್ದು, ಆನಂತರ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಪರೀಕ್ಷೆ ನಡೆಸುವ ವೇಳೆ ಮಕ್ಕಳ ಹಿತವನ್ನೂ ಸಹ ಕಾಪಾಡಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೆ ತಮ್ಮ ಮನೆ ಪಕ್ಕದಲ್ಲೇ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಾಲೆಗಳ ಆರಂಭದ ಬಗ್ಗೆಯೂ ಮಾತನಾಡಿರುವ ಅವರು, “ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬಹುದು, ಎಷ್ಟು ಶೈಕ್ಷಣಿಕ ದಿನಗಳು ಕಡಿಮೆ ಆಗುತ್ತದೆ ಎಂಬ ಬಗ್ಗೆ ಶಿಕ್ಷಣ ಇಲಾಖೆ ಅಧ್ಯಯನ ಮಾಡುತ್ತಿದೆ. ಅಲ್ಲದೆ, ತರಗತಿಗಳನ್ನು ಶಿಫ್ಟ್ ನಲ್ಲಿ‌ ನಡೆಸಬೇಕಾ ಅಥವಾ ಪರ್ಯಾಯ ವ್ಯವಸ್ಥೆ ‌ಮಾಡಬೇಕಾ? ಎಂಬ ಚರ್ಚೆಯೂ ನಡೆಯುತ್ತಿದೆ. ಸೋಮವಾರದ ವೇಳೆಗೆ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಕೂಡಾ ಬಂದಿರುತ್ತದೆ.

ಎಲ್ ಕೆಜಿ, ಯುಕೆಜಿ, ಪ್ರಾಥಮಿಕ ಶಾಲೆಗಳನ್ನು ಯಾವಾಗ ಆರಂಭ ಮಾಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಈ ಹಿಂದೆ ಇದ್ದ ರೀತಿ ಜೂನ್ 1 ಕ್ಕೆ ಶಾಲೆ ಪುನಾರಂಭ ಸಾಧ್ಯತೆ ಕಡಿಮೆ. ಅಲ್ಲದೆ, ಈ ವರ್ಷ ಯಾವುದೇ ಶಾಲೆಗಳು ಶುಲ್ಕದಲ್ಲಿ ಹೆಚ್ಚಳ ಮಾಡದಂತೆ ಸೂಚಿಸಿದ್ದೇವೆ, ಸಾಧ್ಯವಾದರೆ ಕಡಿಮೆ ಮಾಡಿ ಎಂದೂ ಹೇಳಿದ್ದೇವೆ. ಇನ್ನೂ ಎಲ್ ಕೆಜಿ, ಯುಕೆಜಿ ಮಕ್ಕಳಿಗೂ ಆನ್ ಲೈನ್ ಟೀಚಿಂಗ್ ಹಾಸ್ಯಾಸ್ಪದ ಸಂಗತಿ” ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close