ಲೇಖನ

ಈಗಿನ ವಿದ್ಯಾರ್ಥಿಗಳ ಪಾಡು- TikTok ಹೊಟ್ಟೆಗೆ, ಓದು ನೈವೇದ್ಯಕ್ಕೆ

ಲೇಖನ : ವಿಜಯ.ಎ.ಸರೋದೆ ಸಿರವಾರ, ಪತ್ರಕರ್ತ ಹಾಗೂ ಪತ್ರಿಕೋದ್ಯಮ ಪ್ರಧ್ಯಾಪಕ

ಜನರೇಷನ್ ಗ್ಯಾಪ್ ಅನ್ನೋ ವಿದ್ಯಮಾನ ಬಹುಶಃ ಹಿರಿಯರು ಮತ್ತು ಕಿರಿಯರ ನಡುವೆ ಸದಾ ಒಂದಿಲ್ಲೊಂದು ಭಿನ್ನಾಭಿಪ್ರಾಯ ಮತ್ತು ಕಲಹಗಳಿಗೆ ಎಡೆ ಮಾಡಿಕೊಡುತ್ತಲೇ ಇರುತ್ತದೆ. ನಮಗಿಂತ ಕಿರಿಯರ ನಾಡಿ ಮಿಡಿತವನ್ನು(ಆಲೋಚನಾ ಶೈಲಿ, ಅಭಿರುಚಿ, ಆಸಕ್ತಿ ಮತ್ತು ಸಾಮರ್ಥ್ಯ) ಅರಿತಾಗ ಮಾತ್ರ, ನಾವು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ಅವರ ಜೊತೆಗಿನ ಸಂಬಂಧಗಳನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಈ ಬಗೆಯ ವ್ಯತ್ಯಾಸಗಳುಂಟಾಗುವುದು ಮತ್ತು ಅದಕ್ಕೆ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಿರುವುದು ಎಲ್ಲಾ ಕಾಲಕ್ಕೂ ನಡೆದುಕೊಂಡು ಬಂದಿರುವ ಸಂಗತಿಯೇ.

ಹಾಗೇ ತಂದೆ-ತಾಯಿ ಆಗಿರುವವರು, ಪಾಠ ಮಾಡುವ ಶಿಕ್ಷಕರು ಮತ್ತು ಪ್ರಾಧ್ಯಾಪಕರುಗಳು ಈ ಹೊಂದಾಣಿಕೆ ಮಾಡಿಕೊಳ್ಳಬೇಕಾದ ವಿಚಾರದಲ್ಲಿ ಹಾಗೂ ಮಕ್ಕಳ ಚಿಂತನ ಮಟ್ಟವನ್ನು ಮುಟ್ಟುವ ವಿಚಾರದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರಬೇಕಾಗುತ್ತದೆ. ಇದು ಮಕ್ಕಳು ಮತ್ತು ಪೋಷಕರು-ಶಿಕ್ಷಕರ ನಡುವೆ ಸಂಬಂಧ ಸ್ಥಿರವಾಗಿ ನಿಲ್ಲಲು ಹಾಗೂ ಸಂಬಂಧಗಳ ಆಶಯ ಈಡೇರಲು ಸಹಾಯಕಾರಿಯಾಗಿದೆ.

ಈ ಆಧುನಿಕ ಯುಗದಲ್ಲಿ ಹಿರಿ-ಕಿರಿಯರೆನ್ನದೇ ಬಹುಶಃ ಎಲ್ಲರೂ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ. ಮೊಬೈಲ್, ಇಂಟರ್ನೆಟ್, ಸೋಶಿಯಲ್ ಮೀಡಿಯಾ ಸರ್ಫಿಂಗ್, ಗೇಮಿಂಗ್ ಹೀಗೆ ಎಲ್ಲಾ ವಿಚಾರದಲ್ಲೂ ಪೋಷಕರು ತಮ್ಮ ಪಾಲು ಹೊಂದಿದ್ದಾರೆ. ಮಕ್ಕಳ ಅಭಿರುಚಿಯನ್ನು ಅರಿಯಲು ಮತ್ತು ಉತ್ತಮವಾದ ಕೆಲವನ್ನು ಪ್ರೋತ್ಸಾಹಿಸಲು ಇದು ಒಂದು ಮಟ್ಟಿಗಿನ ಸಮಸ್ಯೆಯೇನೂ ಆಗಿಲ್ಲ. ಕೆಲವು ಮಕ್ಕಳು ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್ನಲ್ಲಿ ಕಾಲ ಕಳೆಯುತ್ತಿರುವುದು, ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಇರುವುದು ಮಾತ್ರ ಸಹಜವಾಗಿ ಕೆಲವು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅದರಾಚೆಗೆ ನಾವು ನೀವೆಲ್ಲರೂ ಆತಂಕ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ, ಅದೇನೆಂದರೆ ನಾವು-ನೀವು ಬಳಸುತ್ತಿರುವ ಜನಪ್ರಿಯ TikTok ಆ್ಯಪ್…!!!

ಏನು? ಹೀಗಂದುಬಿಟ್ಟರಲ್ಲಾ! ಅಂತ ನಿಮ್ಮಲ್ಲಿ ಆಲೋಚನೆ ಉಂಟಾಗಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ಸಾಮಾನ್ಯವಾಗಿ ಎಲ್ರೂ ಮೊಬೈಲ್ ಬಳಸುವುದು ಟೈಂಪಾಸ್ಗಾಗಿ. ಈ ಹಿಂದೆ ಪುಸ್ತಕ, ರೇಡಿಯೋ, ಟಿವಿ ಮಾಧ್ಯಮಗಳನ್ನು ಟೈಂಪಾಸ್ ಮಾಡಲು ಬಳಸುತ್ತಿದ್ದೆವು ಇಲ್ಲ ಒಳಾಂಗಣ-ಹೊರಾಂಗಣ ಆಟಗಳನ್ನು ಆಡುತ್ತಿದ್ದೆವು. ಇವುಗಳೆಲ್ಲದರಲ್ಲಿ ಪೂರ್ತಿ ಅಲ್ಲದಿದ್ದರೂ ಒಂದಷ್ಟು ಮಟ್ಟಿಗಿನ ತೊಡಗಿಸಿಕೊಳ್ಳುವಿಕೆ(ಆಲೋಚನೆ, ಚಂತನೆ, ಬುದ್ದಿವಂತಿಕೆ, ಲವಲವಿಕೆ) ಇರುತ್ತಿತ್ತು. ನಮ್ಮ ಬುದ್ದಿಗೆ ಒಂದಷ್ಟು ಮೇವು ಸಿಗುತ್ತಿದ್ದರಿಂದ ನಮ್ಮ ಆಲೋಚನೆ ಹಾಗೂ ಜ್ಞಾನದ ವಿಸ್ತಾರ ಹೆಚ್ಚಿಸಿಕೊಳ್ಳು ಇದು ಸಹಕಾರಿಯಾಗಿತ್ತು. ಆದರೆ ಕಾಲ ಕಳೆದಂತೆ ಈ ಎಲ್ಲದರ ಸ್ಥಾನವನ್ನು ಮೊಬೈಲ್ ಆಕ್ರಮಿಸಿಕೊಂಡಿದೆ. ಕೈಬೆರಳು ಹಾಗೂ ಕಣ್ಣಿಗೆ ಒಂದಷ್ಟು ಕೆಲಸ ಕೊಟ್ಟರೆ ಸಾಕು ಟೈಮ್ ಇಲ್ಲಿ ತುಂಬಾ ಬೇಗ ಪಾಸ್ ಆಗಿಬಿಡುತ್ತದೆ. ಮನರಂಜನೆ ಸಿಕ್ಕುಬಿಡುತ್ತದೆ ಜೊತೆಗೆ ಅದರಿಂದ ಖುಷಿಯೂ ಆಗುತ್ತದೆ, ಆದರೆ ಅದರಿಂದ ಬುದ್ದಿ ಬೆಳವಣಿಗೆ ಎಷ್ಟಾಯ್ತು ಅನ್ನೋದು ಮಾತ್ರ ಗೊತ್ತಿಲ್ಲ.

ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ನಡೆದ ಮನಶ್ಶಾಸ್ತ್ರೀಯ ಅಧ್ಯಯನಗಳ ಪ್ರಕಾರ ನಮ್ಮ ಗಮನ ಕೇಂದ್ರೀಕರಿಸು ಶಕ್ತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇಂಟರ್ನೆಟ್ನಲ್ಲಿ ಎಲ್ಲವೂ ಸುಲಭಕ್ಕೆ ಸಿಕ್ಕಿಬಿಡುತ್ತದೆ, ಒಂದು ವಿಷಯವನ್ನು ನೋಡಿ ಮುಗಿಸುವಷ್ಟಕ್ಕೆ ಇನ್ನೊಂದು ಸಂಗತಿ ನಮ್ಮನ್ನು ಸೆಳೆಯುತ್ತಿರುತ್ತದೆ. ಹಾಗಾಗಿ ಗಿಡದಿಂದ ಗಿಡಕ್ಕೆ ಮಂಗ ಹಾರುವಂತೆ ಕೆಲವಾರು ಸೆಕೆಂಡ್ಗಳಲ್ಲಿಯೇ ನಾವು ಇತರ ಸಂಗತಿಗಳಿಗೆ ಹಾರುತ್ತಿರುತ್ತೇವೆ. ಯಾವೊಂದರ ಮೇಲೂ ಜಾಸ್ತಿ ಹೊತ್ತು ಗಮನ ಕೇಂದ್ರೀಕರಿಸುವುದಿಲ್ಲ‌. ಹಾಗೆ ಮಾಡ್ತೀವೆಂದರೂ ಫುಡ್ ಸ್ಟ್ರೀಟ್ನಲ್ಲಿ ಎಲ್ಲಾ ಆಹಾರಗಳ ಘಮ ನಮ್ಮನ್ನು ಸುತ್ತಲೂ ನೋಡುವಂತೆ ಮಾಡುವ ಪರಿಸ್ಥಿತಿಯೇ ಇಲ್ಲಿ ಉಂಟಾಗಿ, ಮನಸ್ಸು ಬೇಗ ಚಂಚಲವಾಗುತ್ತದೆ.

ಹಾಗಾಗಿ ನಮ್ಮ ಗಮನ ಕೇಂದ್ರೀಕರಿಸುವ ಶಕ್ತಿಗೆ ಇದು ದೊಡ್ಡ ಹೊಡೆತ ನೀಡಿದೆ. ಯೂಟ್ಯೂಬ್, ಫೇಸ್‌ಬುಕ್‌ ಹಾಗೂ ವಾಟ್ಸಪ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂಗತಿಗಳಿಗೆ ನಾವು ಸಾಮಾನ್ಯವಾಗಿ ಕೆಲವು ನಿಮಿಷಗಳ ಗಮನವನ್ನಾದರೂ ನೀಡುತ್ತೇವೆ. ಆದರೆ TikTok ಮಾತ್ರ ಪ್ರತಿ 15 ಸೆಕೆಂಡಿಗೊಮ್ಮೆ ನಮ್ಮನ್ನು ಇನ್ನೊಂದು ಗಿಡಕ್ಕೆ(ಸಂಗತಿ/ವಿಡಿಯೋ) ಹಾರುವಂತೆ ಮಾಡಿ, ಅಕ್ಷರಶಃ ಮಂಗನನ್ನಾಗಿಸಿದೆ. ಪ್ರತಿ ಕ್ಷಣಕ್ಕೂ ಇಲ್ಲಿ ಹೊಸದೇನಾದರೂ ನೋಡಲು ಸಿಗುತ್ತಿರುವುದರಿಂದ, ರೈಲಿನ ಥರ ಫೋನ್ ಮೇಲಿನ ಸ್ಕ್ರೀನ್ ಓಡುತ್ತಲೇ ಇರುತ್ತದೆ.

ವಿದ್ಯಾರ್ಥಿಗಳಿಗಾಗುತ್ತಿರುವ ನಷ್ಟ‌ವೇನು?
ತರಗತಿಗಳು, ಪುಸ್ತಕ, ಓದು-ಬರಹ ಇವೆಲ್ಲಾ ನಮ್ಮ ಗಮನ ಬಯಸುವಂಥವು. ವಿಷಯವೊಂದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಗಮನವಿಟ್ಟು ಪಾಠ ಕೇಳಬೇಕಾಗುತ್ತದೆ ಇಲ್ಲ ಏಕಾಗ್ರತೆಯಿಂದ ಪುಸ್ತಕ ಓದಬೇಕಾಗುತ್ತದೆ. ಒಂದು ವಿಷಯದ ಮೇಲೆ ಒಂದಿಷ್ಟು ಸಮಯ ಹಾಗೂ ಬುದ್ಧಿಯನ್ನು ವ್ಯಯಿಸಿದಾಗ ಮಾತ್ರ ನಮಗೆ ಓದು ತಲೆಗೆ ಹತ್ತುತ್ತೆ ಮತ್ತು ಪರೀಕ್ಷೆಯಲ್ಲಿ ಒಂದಷ್ಟು ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತೆ. ಆದರೆ ಲಾಭ-ನಷ್ಟ ಅರಿಯದೇ ವಿದ್ಯಾರ್ಥಿಗಳೇ ಹೆಚ್ಚಾಗಿ TikTokನ ಗೀಳು ಅಂಟಿಸಿಕೊಂಡಿರುವುದರಿಂದ ಅದರ ನೇರ ಪರಿಣಾಮ ಅವರ ವಿದ್ಯಾಭ್ಯಾಸದ ಮೇಲಾಗುತ್ತಿದೆ. ಕ್ಷಣ-ಕ್ಷಣಕ್ಕೂ ಹೊಸ ಸಂಗತಿಗಳನ್ನು ನೀಡಿ, ಅವರ ಮನಸ್ಸು ಒಂದೆಡೆ ನಿಲ್ಲದಂತೆ ಅದು ಟ್ರೈನಿಂಗ್(ತರಬೇತಿ) ನೀಡುತ್ತಿರುವುದರಿಂದ, ಅವರ ಮನಸ್ಸು ಒಂದೆಡೆ ನಿಲ್ಲದೇ ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಮಕ್ಕಳಿಗೆ ಓದಿಗಿಂತ ಮೊಬೈಲ್ನಲ್ಲೇ ಹೆಚ್ಚು ರುಚಿ ಕಾಣುತ್ತಿದೆ. ಹಾಗಾಗಿ TikTok ಹೊಟ್ಟೆಗೆ, ಓದು ನೈವೇಧ್ಯಕ್ಕೆ ಅನ್ನೋಥರ ಆಗಿ, ಅದರ ನೇರ ಪರಿಣಾಮ ಅವರ ಪರೀಕ್ಷಾ ಫಲಿತಾಂಶದ ಮೇಲಾಗುತ್ತಿದೆ.

ತಂದೆ-ತಾಯಿ, ಪಾಠ ಮಾಡುವವರಿಗೆ ತಾಪತ್ರಯ:
ಈಗಿನ ಮಕ್ಕಳ ಮನಸ್ಥಿತಿ ಹೇಗಿದೆಯೆಂದರೆ ಅವರನ್ನು ತೃಪ್ತಿಗೊಳಿಸುವುದೇ ತುಂಬಾ ವಿಚಿತ್ರವಾದ ಹಾಗೂ ಸವಾಲಿನ ಸಂಗತಿ‌‌. ನಾವು ಎಷ್ಟೇ ಹರಸಾಹಸಪಟ್ಟರೂ ಅವರನ್ನು ಬಹಳಷ್ಟು ಸಮಯ ಒಂದು ವಿಷಯದ ಮೇಲೆ ಕೇಂದ್ರೀಕರಿಸಿಡುವಂತೆ ಮಾಡಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಏನು ಕೆಲಸ ಹೇಳಿದರೂ ಅದು ಅವರಿಗೆ ಬೇಸರದ ಅಥವಾ ರುಚಿಯಿಲ್ಲದ ಸಂಗೀತಿ ಎಂದೆನಿಸತೊಡಗುತ್ತೆ. ಇತ್ತ ಶಾಲೆ-ಪಾಠಗಳಂತೂ ಅವರಿಗೆ ಶಿಕ್ಷಿಸುವ ಅಥವಾ ಕಿರಿ-ಕಿರಿ ಉಂಟುಮಾಡುವ ಸಂಗತಿಗಳಾಗಿ ಕಾಣತೊಡಗಿವೆ. TikTok ಗೀಳು ಅಂಟಿಸಿಕೊಂಡಿರುವ ಕೆಲ ವಿದ್ಯಾರ್ಥಿಗಳ ಸ್ಥಿತಿಯಂತೂ ಇನ್ನೂ ಗಂಭೀರ. ಅವರಿಗೆ ಶಾಲೆ-ಕಾಲೇಜಗಳು ಇರುವುದು TikTok ಮಾಡಲು ಇರುವ ಹಾಟ್-ಸ್ಪಾಟ್ಗಳಂತೆ. ಸಹಪಾಠಿಗಳೇ ಅವರ ಪ್ರಪಂಚ, ತಂದೆ-ತಾಯಿ, ಗುರುಗಳೆಲ್ಲಾ ಅವರ ಕಣ್ಣಿಗೆ ಅನ್ಯ ಗ್ರಹದ ಜೀವಿಗಳಂತೆ ಕಾಣಿಸುತ್ತಾರೆ. ಪರೀಕ್ಷೆಗಳು ಅನ್ಯಗ್ರಹದಲ್ಲಿ ನಡೆಯುವ ವಿಚಿತ್ರ ಸಂಗತಿಯಂತೆ ಭಾಸವಾಗುತ್ತದೆ. ಈ ಎಲ್ಲಾ ಕಾರಣದಿಂದ ಅವರು ನಮ್ಮ ಕಣ್ಣಿಗೆ ಸವಾಲಾಗಿಯೇ ಇದ್ದುಬಿಡುತ್ತಾರೆ. (ಲೇಖನ ಮುಂದುವರೆಯುವುದು)

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close