ಲೇಖನ

ಗಂಗೆಯೋಂದೇ ಅಲ್ಲ ಪತ್ರಿಕೋದ್ಯಮವೂ ಪಾವನವಾಗುತ್ತಿದೆ

ಲೇಖನ : ವಿಜಯ್ . ಎ.ಸರೋದೆ ಸಿರವಾರ, ಪತ್ರಿಕೋದ್ಯಮ ಪ್ರಾಧ್ಯಾಪಕರು

ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತೆ. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಂಗವನ್ನು ಸದಾ ಎಚ್ಚರಿಸುವ ಕಾವಲು ನಾಯಿ ಎಂಬ ಮಾತು ಪತ್ರಿಕೋದ್ಯಮಕ್ಕೆ ಕರ್ತವ್ಯ ನೆನಪಿಸುವ ಮಾರ್ಗಸೂಚಿಯಂತಿದೆ. ಖಡ್ಗಕ್ಕಿಂತ ಲೇಖನ ಹರಿತ ಎನ್ನುವ ಸತ್ಯ ರಾಜಾರಾಮ್ ಮೋಹನರಾಯ್, ಗೋಖಲೆ, ಗಾಂಧಿ, ನೆಹೆರುರಂತಹ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಗಾರರನ್ನು ಪತ್ರಿಕಾ ಸಂಪಾದಕರನ್ನಾಗಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಮಹತ್ವದ್ದು ಮತ್ತು ಇತಿಹಾಸದ ಪುಟಗಳಲ್ಲಿ ಹಿರಿದಾಗಿ ದಾಖಲಾಗಿರುವಂತಹದು.

ಇಷ್ಟೆಲ್ಲಾ ಇದ್ದರೂ ಸ್ವಾತಂತ್ರ್ಯಾ ನಂತರ/ಬದಲಾದ ಪರಿಸ್ಥಿತಿಗಳಲ್ಲಿ ಸೇವೆಗಿಂತ ಲಾಭ ಮುಖ್ಯವಾಗಿದ್ದರಿಂದ, ಪತ್ರಿಕಾ ರಂಗ ನಿಧಾನವಾಗಿ ಉದ್ಯಮದ ರೂಪ ಪಡೆಯತೊಡಗಿತು. ಪತ್ರಿಕೆಗಳನ್ನು ಮಾರಾಟ ಮಾಡುವ ಜೊತೆಗೆ ಜಾಹಿರಾತು ಪ್ರಕಟಿಸಿ ಹಣ ಗಳಿಸುವ ವ್ಯವಹಾರದಂತೆ ಕಂಡಿದ್ದರಿಂದ, ಸೇವೆಯ ಬದಲಾಗಿ ವ್ಯಾಪಾರ ಮನಸ್ಥಿತಿಯವರು ಈ ಕ್ಷೇತ್ರಕ್ಕೆ ಬರುವಂತಾಯಿತು. ಪ್ರಾರಂಭದಲ್ಲಿ ಅವರೂ ಪತ್ರಿಕೋದ್ಯಮದ ನೀತಿ-ತತ್ವಗಳನ್ನು ಪಾಲಿಸಿದರು, ಸೇವ ಮೋನೋಭಾವ ಹಾಗೂ ಜನಪರ ಕಾಳಜಿಯುಳ್ಳ ಸಂಪಾದಕರು ಹಾಗೂ ವೃತ್ತಿಪರ ಪತ್ರಕರ್ತರು ಮಾಧ್ಯಮ ಸಂಸ್ಥೆಗಳಲ್ಲಿದ್ದುದರಿಂದ ಜನರಲ್ಲಿ ಮೊದಲೇ ಮನೆ ಮಾಡಿದ್ದ ವಿಶ್ವಾಸ ಉಳಿಯಿತು. ಆದರೆ ಕಾಲಾನಂತರ ಈ ಕ್ಷೇತ್ರದಲ್ಲಿಯೂ ಪೈಪೋಟಿ ಹೆಚ್ಚಿದ್ದರಿಂದ ನಿಧಾನವಾಗಿ ನೀತಿ-ತತ್ವಗಳು ಮಾಯವಾಗಿ, ಆಕರ್ಷಣೆಯ ವಸ್ತುಗಳು ಅಲ್ಲಿ ಮನೆ ಮಾಡತೊಡಗಿದವು. ತಮ್ಮ ರಾಜಕೀಯ ಬೇಳೆ ಬೇಯಿಸಲು, ವಿರೋಧಿಗಳನ್ನು ಹತೋಟಿಯಲ್ಲಿಡಲು, ಪ್ರಭಾವಿಗಳಿಂದ ಸುಲಿಗೆ ಮಾಡಲು ಮಾಧ್ಯಮ ಒಂದು ಅಸ್ತ್ರವಾಗಿ ಕಂಡಿದ್ದರಿಂದ ಪೈಪೋಟಿಯ ಕಾರಣದಿಂದ ನಷ್ಟದಲ್ಲಿದ್ದ ಪತ್ರಿಕೆ-ಚಾನೆಲ್ಗಳನ್ನು ಖರೀದಿಸತೊಡಗಿದರು. ಒಂದಿಷ್ಟು ರಾಜಕಾರಣಿಗಳು ತಾವೇ ಪತ್ರಿಕೆ-ಚಾನೆಲ್ಗಳನ್ನೂ ಹುಟ್ಟುಹಾಕಿದರು. ಹೀಗೆ ಸಮಾಜಿಕ ಸೇವಾಕರ್ತರ ಕೈಗಳಲ್ಲಿದ್ದ ಮಾಧ್ಯಮ ಸಂಸ್ಥೆಗಳು ಮೆಲ್ಲನೇ ಉದ್ಯಮಿಗಳು-ರಾಜಕಾರಣಿಗಳ ಕೈ ಸೇರಿದವು. ಅಲ್ಲಿಂದಾಚೆಗೆ ಪ್ರಾರಂಭವಾಗಿದ್ದೇ ಸಮಾಜದ ಮುಂದೆ ಪತ್ರಿಕೆಗಳ ‘ಮಾನ’ ಭಂಗ(ಒಂದರ್ಥದಲ್ಲಿ ದ್ರೌಪದಿಗಾದ ಸ್ಥಿತಿ)…!

ಹೀಗೆ ಮಾಧ್ಯಮ ಸಂಸ್ಥೆಗಳು ತನ್ನೆಲ್ಲಾ ಹಿಂದಿನ ಸೇವೆ-ಕಾಳಜಿ-ಸಾಧನೆಗಳನ್ನು ಮತೆತು‌, ಜನರ ದೃಷ್ಟಿಯಲ್ಲಿ ‘ಸಣ್ಣ’ವಾಗತೊಡಗಿದವು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ನೋಡಿದರೆ ಸಾಕು ರಾಜಕೀಯ, ಖಾಸಗಿ ಹಾಗೂ ಜಾತಿ ಆಧಾರಿತ ಕಾರ್ಯಕ್ರಮ-ಸನ್ಮಾನಗಳ ಸುದ್ದಿಗಳೇ! ಸಮಾಜದಲ್ಲಿರುವ ಸಮಸ್ಯೆಗಳು, ಬೆಳವಣಿಗೆಗಳ ಪ್ರಚಾರ ವೇದಿಕೆಯಾಗಿ ಜನರು, ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ಅರಿವು ಮೂಡಿಸಬೇಕಿದ್ದ ಪತ್ರಿಕೆಗಳು ರಾಜಕೀಯ, ಸಿನಿಮಾ ಹಾಗೂ ಜಾತಿ/ಧಾರ್ಮಿಕ ಪುಡಾರಿಗಳ ಪ್ರಚಾರ ಒಡ್ಡೋಲಗಗಳಾಗಿ ಬದಲಾಗಿದ್ದವು. ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಬರುವುದಿರಲಿ, ಇರುವ ತಿಳುವಳಿಕೆ ನಷ್ಟವಾಗಿ ಮನದಲ್ಲಿ ಜಾತಿ-ಧರ್ಮ-ರಾಜಕೀಯ ವಿಷಬೀಜಗಳ ಅಂಕುರವಾಗಿ ನೆಮ್ಮದಿ ಹಾಳಾಗುವ ಪರಿಸ್ಥಿತಿ ಇತ್ತು. ಆದರೆ ಕರೋನಾ ಬಂದಾಗಿನಿಂದ ಇವ್ಯಾವುದರ ಹಾವಳಿಯೂ ಕಾಣುತ್ತಿಲ್ಲ. ಮನುಷ್ಯನ ಎಲ್ಲಾ ಅತಿಶಯ-ಅವಿವೇಕಗಳಿಗೂ ಬ್ರೇಕ್ ಬಿದ್ದಿರುವುದರಿಂದ, ಪತ್ರಿಕೆಗಳೂ ಮೆಲ್ಲನೇ ಸಮಸ್ಯೆ-ಬೆಳವಣಿಗೆಗಳ ವಿವೇಕಯುತ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಲಾಕ್ಡೌನ್ ಪ್ರಾರಂಭವಾದಾಗಿನಿಂದ ಪ್ರಕೃತಿಯೊಂದೇ(ನದಿ, ವಾಯುಮಂಡಲ, ಭೂಮಿ) ಸುಧಾರಿಸುತ್ತಿಲ್ಲ, ಪತ್ರಿಕೋದ್ಯಮವೂ ತನ್ನ ಮೂಲ ಹಾದಿಗೆ ತಿರುಗಿದೆ. “ಎಲ್ಲಾ ಕಾಲದ ಮಹಿಮೆ”

Continue

Related Articles

Leave a Reply

Your email address will not be published. Required fields are marked *

Back to top button
Close
Close