ಲೇಖನ

ಗ್ರಾಮಸ್ವರಾಜ್ಯಕ್ಕೆ ಮುನ್ನುಡಿ ಈ ಕರೋನಾ!

ಲೇಖನ : ವಿಜಯ್. ಎ.ಸರೋದೆ, ಸಿರವಾರ

ಗ್ರಾಮಸ್ವರಾಜ್ಯಕ್ಕೆ ಮುನ್ನುಡಿ ಈ ಕರೋನಾ!

ಸ್ವಾತಂತ್ರ್ಯಾ ನಂತರದಿಂದಲೂ ಗ್ರಾಮಗಳನ್ನು ನಿರ್ಲಕ್ಷ್ಯಿಸುತ್ತಾ ಬಂದಿದ್ದೇವೆ. ಸಾಮಾಜದ ಸರ್ವಾಂಗೀಣ ಬೆಳವಣಿಗೆಯಲ್ಲಿ ಗ್ರಾಮಗಳೂ ಮಹತ್ವದ ಪಾತ್ರ ವಹಿಸಿವೆ, ಗ್ರಮೀಣ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಅವರ ಸೇವೆಗೆ ತಕ್ಕ ಮೌಲ್ಯ ಒದಗಿಸಿ ಜೀವನ ಭದ್ರತೆ ಒದಗಿಸಬೇಕು‌, ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡಬೇಕು ಎಂದು ಗಾಂಧೀಜಿಯವರು ತಮ್ಮ ತತ್ವಗಳಲ್ಲಿ ಹೇಳಿದ್ದಾರೆ. ನೋಟಿನ ಮೇಲೆ ಗಾಂಧಿ ಫೋಟೋ ಮುದ್ರಿಸುವ, ಕಚೇರಿಯಲ್ಲಿ ಅವರ ಫೋಟೋ ಇಟ್ಟ ಪೂಜಿಸುವ ಸರ್ಕಾರಗಳು ವಿಪರ್ಯಾಸವೆಂಬಂತೆ ಅವರ ಈ ನೀತಿ-ತತ್ವಗಳನ್ನು ಬಹುತೇಕ ಮರೆತೇಬಿಟ್ಟವು. ಗ್ರಾಮಗಳನ್ನು ನಿರ್ಲಕ್ಷ್ಯಿಸಿದ ಸರ್ಕಾರಗಳು, ಅವುಗಳನ್ನು ಕೊಳಕಾಗೇ ಇರಲು ಬಿಟ್ಟು ನಗರಗಳಿಗೆ ಸುಣ್ಣ-ಬಣ್ಣ ಬಳೆಯತೊಡಗಿದವು(ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬಣ್ಣ ಅಂತಾರಲ್ಲ, ಹಾಗಲ್ಲ. ಎರಡೂ ಒಂದೇ ಕಣ್ಣಿಗೆ). ಗ್ರಾಮ ಎಂದರೆ ಕೃಷಿ-ಹೈನುಗಾರಿಕೆ ಮಾತ್ರ, ನಿಸರ್ಗದ ಮೇಲೆ ಅವಲಂಬಿತವಾಗಿರುವ ಆ ಉದ್ಯೋಗಗಳಿಗೂ ಸರ್ಕಾರ ಅಗತ್ಯ ಭದ್ರತೆ ಒದಗಿಸುವುದಿಲ್ಲ, ಅವುಗಳ ಒಳಿತು-ಕೆಡುಕೇನಿದ್ದರೂ ನಿಮಗೇ ಅಂತ ಮೈಮರೆತು ಕುಳಿತವು. ಅಲ್ಲಿಂದಾಚೆಗೆ ಪ್ರಾರಂಭವಾಗಿದ್ದೇ ನಗರ ವಲಸೆ. ಕೃಷಿಯಲ್ಲಿ ಭವಿಷ್ಯ ಕಾಣದ ಚಿಂತನಶೀಲ ನವ ಉತ್ಸಾಹಿ ಯುವಕರೆಲ್ಲ, ಗ್ರಾಮಗಳಿಗೆ ತಮ್ಮ ಶಕ್ತಿ-ಶ್ರಮ-ಸೇವೆ ನೀಡುವುದು ಬಿಟ್ಟು ಕಣ್ಮನ ಸೆಳೆಯುವ ನಗರಗಳ ಜೀವನಕ್ಕೆ ಮರುಳಾಗತೊಡಗಿದರು. ಹೀಗೆ ಸಮಾಜದಲ್ಲಿ ಮೆಲ್ಲಗೇ ಅಸಮತೋಲನ ಮನೆ ಮಾಡತೊಡಗಿತು. ಎಲ್ಲರೂ ಪಲ್ಲಕ್ಕೀಲಿ ಕೂಡ್ತೀನೆಂದರೆ, ಅದನ್ನು ಹೊರೋರ್ಯಾರು? ಎಂಬ ಗಾದೆಯಂತೆ ಎಲ್ರೂ ನಗರಗಳಿಗೆ ಹೋಗಿ ಕುಳಿತರೆ, ತಿನ್ನೋ ಆಹಾರ ಬೆಳೆಯುವವರ್ಯಾರು? ಹೂವು, ಹಣ್ಣು, ತರಕಾರಿ ಸೇರಿದಂತೆ ನಗರ ಜೀವನಕ್ಕೆ ಬೇಕಾದ ವಸ್ತು-ಸೇವೆ-ಸಾಮಗ್ರಿಗಳನ್ನು ಒದಗಿಸುವವರ್ಯಾರು ಎಂಬ ಪ್ರಶ್ನೆ ಏಳತೊಡಗಿತು ಜೊತೆಗೆ ಸೃಷ್ಟಿಯಾದ ಆ ಕಂದಕ ಮೆಲ್ಲಗೇ ದೊಡ್ಡದಾಗತೊಡಗಿತು(ಇದೆಲ್ಲದರ ಪರಿಣಾಮವೇ ಆಹಾರ ಕೊರತೆ, ಬೆಲೆ ಏರಿಕೆ, ನಗರ ಅನೈರ್ಮಲ್ಯ, ಜನದಟ್ಟಣೆ). ಈಗ ಕರೋನಾ ಈ ಎಲ್ಲಾ ಸಮಸ್ಯೆಗೆ ತನ್ನದೇ ಆದ ರೀತಿಯಲ್ಲಿ ಟ್ರೀಟ್ಮೆಂಟ್ ಕೊಡಲು ಪ್ರಾರಂಭಿಸಿದೆ.‌ ನಗರಗಳಲ್ಲಿ ಮಾಡಲು ಕೆಲಸ, ತಿನ್ನಲು ಅನ್ನ ಇಲ್ಲದಂತೆ ಮಾಡಿ NRV(ನಾನ್ ರೆಸಿಡೆನ್ಸಿಯಲ್ ವಿಲೇಜರ್)ಗಳನ್ನು ಮತ್ತೆ ತಮ್ಮ ಗ್ರಾಮಗಳಿಗೆ ಹಿಂದಿರುಗುವಂತೆ ಮಾಡಿದೆ. ಲಾಕ್ಡೌನ್ನಿಂದ ಅವರು ಅನುಭವಿಸಿರುವ ಸಂಕಷ್ಟ, ಕರೋನಾ ಅಷ್ಟು ಸುಲಭಕ್ಕೆ ಮಾಯವಾಗುವ ಲಕ್ಷಣ ಇಲ್ಲದಿರುವುದು, ನಗರ ಆರ್ಥಿಕತೆ ಸಾಮಾನ್ಯ ಸ್ಥಿತಿಗೆ ಮರಳಲು ಇನ್ನು ತಿಂಗಳುಗಳೇ ಬೇಕಿರುವುದರಿಂದ‌‌. ಸದ್ಯಕ್ಕಂತೂ ಯಾವ NRV ಕೂಡಾ ನಗರದ ಕಡೆ ಮುಖ ಮಾಡಲ್ಲ, ಹಾಗೇನಾದ್ರೂ ಹೋದ್ರೂ ಮೊದಲಿನಂತೆ ಗುಂಪು ಕಟ್ಟಿಕೊಂಡು ದೊಡ್ಡ ಸಂಖ್ಯೆಯಲ್ಲಿ ಖಂಡಿತ ಹೋಗಲ್ಲ. ಈ ಎಲ್ಲ ಕಾರಣದಿಂದ ಭಾರತದ ಬಹುಪಾಲು ಮಾನವ ಸಂಪನ್ಮೂಲ ಗ್ರಾಮಗಳನ್ನು ಸೇರಲಿದೆ. ಗ್ರಾಮಗಳೂ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಲಿವೆ. ಈಗ ಸರ್ಕಾರ ಬರಿ ನಗರಗಳಲ್ಲಿ ಮಾತ್ರ ಅಭಿವೃದ್ಧಿ ಮಾಡುತ್ತಾ ಕುಳಿತರೆ, ಗಿರಾಕಿಗಳಿಲ್ಲದ ಹೋಟೆಲ್ನಲ್ಲಿ ಅಡುಗೆ ಮಾಡಿದಂತೆ. ಇದರಿಂದ ಅದಕ್ಕೆ ನಿರೀಕ್ಷಿತ ಆದಾಯವೇನೂ ಬರಲ್ಲ. ಹಾಗಾಗಿ ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವುದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ಮೂಲ ಸೌಕರ್ಯಗಳನ್ನು ಒದಗಿಸುವುದು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ‌. ಕರೋನಾ (ಅ)ವ್ಯವಸ್ಥೆಯ ರೂಪುರೇಷೆಯನ್ನೇ ಬದಲಿಸಲು ಹೊರಟಿದೆ. ಗ್ರಾಮಕೇಂದ್ರಿತ ಸಮಾಜ, ಗ್ರಾಮಕೇಂದ್ರಿತ ಆರ್ಥಿಕತೆಗೆ ಇದು ಮುನ್ನುಡಿ ಬರೆಯಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಏನೇ ಯೋಜನೆ-ಅಭಿವೃದ್ಧಿ ಕೈಗೊಂಡರೂ ಗ್ರಾಮಗಳೆ ಹೆಚ್ಚಿನ ಪಾಲುದಾರವಾಗಲಿವೆ. ಇದು ಕರೋನಾ ಸೃಷ್ಟಿಸಿರುವ ಮಾಯೆ.

Continue

Related Articles

One Comment

Leave a Reply

Your email address will not be published. Required fields are marked *

Back to top button
Close
Close